
ಬಂಡೀಪುರ ರಸ್ತೆಯಲ್ಲಿ ಕಾಡಾನೆ ಜತೆ ಸೆಲ್ಫೀ ತೆಗೆಯಲು ಹೋಗಿ ದಾಳಿಗೆ ಒಳಗಾದ ವ್ಯಕ್ತಿ ಯಾರೆಂಬುದು ಪತ್ತೆಯಾಗಿದೆ. ಆರಂಭದಲ್ಲಿ ಆತ ಕೇರಳ ಮೂಲದವರು ಎಂದು ಭಾವಿಸಲಾಗಿತ್ತು. ಆದರೆ, ಆ ವ್ಯಕ್ತಿ ನಂಜನಗೂಡು ಮೂಲದ ಬಸವರಾಜು ಎಂಬುದು ಗೊತ್ತಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಕಣ್ತಪ್ಪಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಕೇರಳ ಕಡೆಗೆ ಹೋಗಿಬಂದಿದ್ದರು. ಆದರೆ, ನಂತರ ಅವರನ್ನು ಪತ್ತೆ ಮಾಡಿದ ಅರಣ್ಯ ಇಲಾಖೆ, 25 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ, ಅವರಿಂದಲೇ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ಸಾರುವ ವಿಡಿಯೋ ಮಾಡಿಸಿ ಬಿಡುಗಡೆ ಮಾಡಿಸಿದೆ.


ಕಾಡಾನೆ ದಾಳಿಗೊಳಗಾದ ಬಸವರಾಜು ಹೇಳಿದ್ದೇನು?
‘ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ವಾಪಸ್ ಬರುವಾಗ ಮೋಜು ಮಸ್ತಿಗೆ ಕಾಡಾನೆ ಜತೆ ಸೆಲ್ಫೀ ತೆಗೆಯಲು ಮುಂದಾಗಿದ್ದೆ. ಈ ವೇಳೆ ನನ್ನ ಮೇಲೆ ಕಾಡಾನೆ ದಾಳಿ ನಡೆಸಿತು. ನನ್ನ ಪ್ರಾಣ ಉಳಿದಿದ್ದೇ ಹೆಚ್ಚು. ಯಾರು ಕೂಡ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟ ಆಡಬೇಡಿ. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನನ್ನ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡು ದಂಡ ವಿಧಿಸಿದೆ. ಅದಕ್ಕಿಂತಲೂ ಜೀವ ಉಳಿದಿದ್ದು ಮುಖ್ಯ’ ಎಂದು ಬಸವರಾಜು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.