
ಕಾಸರಗೋಡು: ಜಿಲ್ಲೆಗೆ ಅಮೀಬಿಕ್ ಮಿದುಳು ಜ್ವರ ಕಾಲಿರಿಸಿರುವುದು ದೃಢವಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ 6 ವರ್ಷದ ಬಾಲಕ ಸಹಿತ ಕಣ್ಣೂರು ಜಿಲ್ಲೆಯ ಮೂರೂವರೆ ವಯಸ್ಸಿನ ಮಗುವಿಗೂ ಮಿದುಳು ಜ್ವರ ದೃಢೀಕರಿಸಲಾಗಿದೆ. ಇಬ್ಬರೂ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನ ಪ್ರತ್ಯೇಕ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಆತಂಕಕಾರಿಯೇನಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ.


ಈಗಾಗಲೇ ಈ ವರ್ಷ ಕೇರಳದಲ್ಲಿ 42 ಮಂದಿಗೆ ಅಮೀಬಿಕ್ ಮಿದುಳು ಜ್ವರ ಬಾಧಿಸಿದೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. ಕಳೆದ 45 ದಿನಗಳಲ್ಲಿ ಕೇರಳದಲ್ಲಿ ಒಟ್ಟು 15 ಮಂದಿ ಅಮೀಬಿಕ್ ಮಿದುಳು ಜ್ವರಕ್ಕೆ ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆ ವಿಶೇಷ ಎಚ್ಚರಿಕೆ ವಹಿಸಿದೆ. ಎಲ್ಲ ಜಲಮೂಲಗಳನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ಆರೋಗ್ಯ ಇಲಾಖೆ ಸ್ಥಳೀಯಾಡಳಿತ ಸಹಕಾರದೊಂದಿಗೆ ಮುಂದಾಗಿದೆ.ಅಮೀಬಿಕ್ ಮಿದುಳು ಜ್ವರವು ಮೆದುಳಿನ ಮೇಲೆ ನೇರ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದೆ. ತಲೆನೋವು, ವಾಂತಿ, ವಾಕರಿಕೆ, ಕುತ್ತಿಗೆ ನೋವು ಮೊದಲಾದವುಗಳೊಂದಿಗೆ ದಿಢೀರನೆ ಜ್ವರ ಬರುವುದು ಈ ರೋಗ ಸೋಂಕಿನ ಲಕ್ಷಣವಾಗಿದೆ. ಇದರ ಹರಡುವಿಕೆಯನ್ನು ಆರೋಗ್ಯ ಇಲಾಖೆ ನಿಯಂತ್ರಿಸಿದೆಯಾದರೂ ರೋಗದ ಮೂಲ ಪತ್ತೆಯಾಗಿಲ್ಲ.