
ಮಂಗಳೂರು: ಇನ್ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು ಗಮನಿಸಿ ಷೇರು ಟ್ರೇಡಿಂಗ್ನಲ್ಲಿ ವ್ಯವಹಾರ ಮಾಡಲು ಹೋಗಿ ವ್ಯಕ್ತಿಯೊಬ್ಬರು 74,18,952 ರೂಪಾಯಿ ವಂಚನೆಗೊಳಗಾದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ವ್ಯಕ್ತಿ ಮಾರ್ಚ್ 15ರಂದು ಇನ್ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ ಷೇರು ಟ್ರೇಡಿಂಗ್ ಜಾಹೀರಾತು ಗಮನಿಸಿದ್ದಾರೆ. ಜಾಹೀರಾತನ್ನು ಕ್ಲಿಕ್ ಮಾಡಿದಾಗ ಷೇರು ಟ್ರೇಡಿಂಗ್ ಮಾಹಿತಿ ದೊರಕಿದೆ. ಬಳಿಕ ಅಪರಿಚಿತ ವ್ಯಕ್ತಿಯಿಂದ ವಾಟ್ಸಾಪ್ ಲಿಂಕ್ ಬಂದಿದೆ. ಲಿಂಕ್ ತೆರೆದು ನೋಡಿದಾಗ ಅದರಲ್ಲಿ ಗ್ರೂಪ್ನ ಲಿಂಕ್ ಕಂಡಿದೆ. ಈ ಮೂಲಕ ದೂರುದಾರ ಗ್ರೂಪ್ಗೆ ಸೇರಿಕೊಂಡಿದ್ದಾರೆ. ಗ್ರೂಪ್ನಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಆನ್ಲೈನ್ ಮೂಲಕ ತರಬೇತಿ ನೀಡಿದ್ದಾರೆ. ಏಪ್ರಿಲ್ 25ರಂದು ಕಂಪೆನಿಯಿಂದ ಟ್ರೇಡಿಂಗ್ ಖಾತೆ ತೆರೆಯಲು ವಾಟ್ಸಾಪ್ ಮೆಸೇಜ್ ಬಂದಿದೆ. ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದೆಂದು ಪ್ರೇರೇಪಿಸಿದ್ದಾರೆ. ಲಾಭದ ಆಸೆ ತೋರಿಸಿ ಸಂತ್ರಸ್ತನಿಗೆ ಮೊದಲಿಗೆ 10 ಸಾವಿರ ಹಣ ತೊಡಗಿಸಲು ತಿಳಿಸಿ ಇಂಡಸ್ ಇಂಡ್ ಬ್ಯಾಂಕ್ ಖಾತೆಯ ವಿವರ ಕಳುಹಿಸಿದ್ದಾರೆ. ಅದರಂತೆ ದೂರುದಾರ ಆ ಬ್ಯಾಂಕ್ ಖಾತೆಗೆ 10,000ರೂ. ಹಣ ಪಾವತಿಸಿದ್ದಾರೆ. ಬಳಿಕ ಮಾ.15ರಿಂದ ಜು.4ರವರೆಗೆ ವಾಟ್ಸ್ಆ್ಯಪ್ ಮೆಸೆಜ್ ಮೂಲಕ ಕಂಪೆನಿಯವರು ಎಂದು ಪರಿಚಯಿಸಿಕೊಂಡು ಷೇರು ಟ್ರೇಡಿಂಗ್ನಲ್ಲಿ ಹಣ ತೊಡಗಿಸಲು ಹೇಳಿದ್ದರು. ದೂರುದಾರರು ಹಂತಹಂತವಾಗಿ ಅಪರಿಚಿತರು ನೀಡಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಹಣವನ್ನು ಕಂಪನಿಯವರಿಗೆ ಪೋನ್ ಪೇ ಮೂಲಕ ಪಾವತಿಸಿದ್ದಾರೆ. ಬಳಿಕ ಕಂಪನಿಯಿಂದ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ತಾವು ಮೋಸ ಹೋಗಿರುವುದು ಗಮನಕ್ಕೆ ಬಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

