
ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್ಯಾರ್ಡ್ಗೆ ಸಂಬಂಧಿಸಿದ ನೌಕರರು ಭಾರತೀಯ ನೌಕಾಸೇನೆಗೆ ಸೇರಿದ ಅತ್ಯಂತ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಅನಧಿಕೃತವಾಗಿ ರವಾನಿಸಿ ಅಕ್ರಮ ಲಾಭ ಪಡೆದಿರುವ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



ಗುಜರಾತ್ ರಾಜ್ಯದ ಆನಂದ ತಾಲೂಕಿನ ಕೈಲಾಸ್ ನಗರ ನಿವಾಸಿ ಹೀರೇಂದ್ರ ಕುಮಾರ್ ಅಲಿಯಾಸ್ ಭರತ್ ಕುಮಾರ್ ಖಡಯಾತ್ (34) ಬಂಧಿತ ಆರೋಪಿ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂವರಿಗೆ ಏರಿಕೆಯಾಗಿದೆ. ಈ ಮೊದಲು ಉತ್ತರ ಪ್ರದೇಶದ ನಿವಾಸಿಗಳಾದ ರೋಹಿತ್ ಹಾಗೂ ಸಂತ್ರಿ ಅವರನ್ನು ಪೊಲೀಸರು ಬಂಧಿಸಿದ್ದರು. ಮೂವರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಲ್ಪೆ ಶಿಪ್ಯಾರ್ಡ್ನ ಸಹಗುತ್ತಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೋಹಿತ್ ಮತ್ತು ಸಂತ್ರಿ, ಭಾರತೀಯ ನೌಕಾಸೇನೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿ ಹಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪದ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ಅವರ ನೇತೃತ್ವದ ತಂಡ, ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ ಮಾಹಿತಿ ಆಧರಿಸಿ ಡಿ.21ರಂದು ಹೀರೇಂದ್ರ ಕುಮಾರ್ನನ್ನು ಬಂಧಿಸಿದೆ. ಹಣದ ಲಾಭಕ್ಕಾಗಿ ತನ್ನ ಹೆಸರಿನಲ್ಲಿ ಸಿಮ್ಕಾರ್ಡ್ ಪಡೆದು ಆರೋಪಿಗಳಿಗೆ ನೀಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ

