
ಮಂಗಳೂರು: ದಸರಾ ಧಾರ್ಮಿಕ ದಾಂಡಿಯಾ ಹೆಸರಿನಲ್ಲಿ ಮಾದಕದ್ರವ್ಯ ಸೇವನೆ ಮಾಡಿ ಅಸಭ್ಯ ನೃತ್ಯ ಕಾರ್ಯಕ್ರಮಗಳನ್ನು ಮಂಗಳೂರು ನಗರದಲ್ಲಿ ಆಯೋಜಿಸಲಾಗಿದೆ. ಯುವಕ -ಯುವತಿಯರು ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ಆಮಂತ್ರಣ ಪತ್ರಿಕೆಗಳನ್ನು ಹಂಚಿದ್ದು, ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ವಿಎಚ್‌ಪಿ ದುರ್ಗಾವಾಹಿನಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ದಾಂಡಿಯಾ ನೃತ್ಯ ಜಗನ್ಮಾತೆ ದುರ್ಗಾದೇವಿಯ ಹೆಸರಿನಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ. ಕರಾವಳಿಯ ಪರಶುರಾಮ ಸೃಷ್ಟಿಯ ಈ ಪವಿತ್ರ ಭೂಮಿಯಲ್ಲಿ ಧಾರ್ಮಿಕ ಹೆಸರಿನಲ್ಲಿ ಅಸಭ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಕಳೆದ ವರ್ಷ ನಡೆದ ಇಂತಹ ಕಾರ್ಯಕ್ರಮಗಳಲ್ಲಿ ಡ್ರಗ್ಸ್, ಮಾದಕದ್ರವ್ಯ ಸೇವನೆ, ಅಸಭ್ಯ ನೃತ್ಯಗಳ ಬಗ್ಗೆ ದೂರು ಬಂದಿದ್ದು, ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಈ ರೀತಿಯ ಕಾರ್ಯಕ್ರಮದಿಂದ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಅನುಮತಿ ನೀಡಬಾರದು ಎಂದು ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ವೇತಾ ಅದ್ಯಪಾಡಿ, ಸಹ ಸಂಯೋಜಕಿ ತುಳಸಿ ಎಸ್.ಮೆಂಡನ್, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಸುಕನ್ಯಾ ರಾವ್ ಮನವಿಯಲ್ಲಿ ಆಗ್ರಹಿಸಿದ್ದಾರೆ.

