
ಮಂಗಳೂರು : ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘವು ಪ್ರತಿಷ್ಠಿತ ಸಮುದಾಯ ಸೇವಾ ಪುರಸ್ಕಾರಕ್ಕೆ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನು ಆಯ್ಕೆ ಮಾಡಿದೆ.


ಸಮಾಜ ಮುಖಿ ವೈದ್ಯಕೀಯ ಸೇವೆ, ವೈದ್ಯಕೀಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಸಿಡಿಲಬ್ಬರದ ಸಂಘಟಕ, ನೇರ ಮಿಂಚಿನ ಮಾತು, ದಿಟ್ಟ ಸ್ಪಷ್ಟ ಬರಹ, ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಟ ಮಾಡಬಲ್ಲ ವೈದ್ಯ ಎಂಬ ಖ್ಯಾತಿಯ ಡಾ ಕುಲಾಲ್, ಐಎಂಎ, ಕುಟುಂಬ ವೈದ್ಯರ ಸಂಘ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡಕಟ್ಟೆ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ವೈದ್ಯ ಬರಹಗಾರರ ಬಳಗ, ಯುವ ವೇದಿಕೆ ಸಹಿತ ನೂರಾರು ಸಂಘಟನೆಗಳ ಜೊತೆ ಸದ್ದಿಲ್ಲದೇ ದುಡಿಯುತ್ತಾ, ತನು ಮನ ಧನಗಳ ಸಹಕಾರ ನೀಡುತ್ತಾ, ಮುಗುಳ್ನಗುತ್ತಾ ಸದ್ದಿಲ್ಲದೇ ಸುದ್ದಿಯಾದವರು.
ನಾಡಿನ ಶ್ರೇಷ್ಠ ಪುರಸ್ಕಾರ ವಾದ ದೇವರಾಜ ಅರಸು ಪುರಸ್ಕಾರ, ರಾಜ್ಯ ಐಎಂಎ ರಾಜ್ಯ ಡಾ ಬಿ ಸಿ ರಾಯ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಹೊಯ್ಸಳ ಪುರಸ್ಕಾರ, ಅಂತರಾಷ್ಟ್ರೀಯ ಆರ್ಯಭಟ ಪುರಸ್ಕಾರ, ಮಂಗಳೂರು ಐಎಂಎ ಯಿಂದ ಜೀವ ಮಾನ ಸಾಧನ ಪುರಸ್ಕಾರ ಸಹಿತ ನೂರಾರು ಗೌರವ ಪಡೆದಿರುವ ಇವರು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಡಾ ಬಿ ಸಿ ರಾಯ್ ರಾಷ್ಟ್ರ ಪುರಸ್ಕಾರವನ್ನ ಹೊಸದೆಹಲಿಯಲ್ಲಿ ಜುಲೈ 13 ರಂದು ಕೇಂದ್ರಸರಕಾರದ ಪ್ರತಿನಿಧಿ ಯವರ ಉಪಸ್ಥಿತಿ ಯಲ್ಲಿ ರಾಷ್ಟ್ರೀಯ ಐಎಂಎ ನಾಯಕರ ಕೈಯಿಂದ ಸ್ವೀಕರಿಸಲಿದ್ದಾರೆ ಎಂಬುದೇ ಸಮುದಾಯಕ್ಕೆ ಹೆಮ್ಮೆ. ವೈದ್ಯಕೀಯ ವೃತ್ತಿ ಯಲ್ಲಿ ಜೀವ ಮಾನದ ಸಾಧನೆಗೆ ಪಡೆಯುವ ಈ ಪುರಸ್ಕಾರಕ್ಕೆ ಭಾಜನಾಗುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಡಾ ಕುಲಾಲ್ ಅತಿ ಕಿರಿಯ ವಯಸ್ಸಿನ ಸಾಧಕರು.

