
ಕುಂದಾಪುರ : ಕೋಟ ಕಾರಂತ ಥೀಂ ಪಾರ್ಕ್ನಲ್ಲಿ ಮೇ 4ರಂದು ನಡೆಯಲಿರುವ ಕುಂದಾಪ್ರ ಕನ್ನಡ 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಂಘಟಕ ಡಾ.ಅಣ್ಣಯ್ಯ ಕುಲಾಲ ಉಳ್ತೂರು ಆಯ್ಕೆಯಾಗಿದ್ದಾರೆ.


ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟದ ಉಸಿರು, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಣೂರು ಗೀತಾನಂದ ಫೌಂಡೇಷನ್, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಸಮ್ಮೇಳನಕ್ಕೆ ಸಹಕಾರ ನೀಡಲಿವೆ ಎಂದು ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಅಧ್ಯಕ್ಷ ಸತೀಶ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಿಡಿಒ ರವೀಂದ್ರ ರಾವ್, ಸಂಚಾಲಕಿ ಜ್ಯೋತಿ ಸಾಲಿಗ್ರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಣ್ಣಯ್ಯ ಕುಲಾಲ್
ತೆಕ್ಕಟ್ಟೆ ಸಮೀಪದ , ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ.
ಮಂಗಳೂರಿನ ಪ್ರತಿಷ್ಠಿತ KMC ಯಲ್ಲಿ MBBS ಮುಗಿಸಿದರು.ಕಳೆದ ೨೫ ವರ್ಷ ಗಳಿಂದ, ಬೇಗ ಕೆಲಸಕ್ಕೆ ಹೋಗುವವರಿಗೆ, ಕೂಲಿ ಕಾರ್ಮಿಕರಿಗೆ ಸಹಾಯ ಆಗಲೆಂದು, ಬೆಳಿಗ್ಗೆ 7 ಗಂಟೆಗೆ ಕ್ಲಿನಿಕ್ ನಡೆಯಿಸುತ್ತಿರುವವರು ನಮ್ಮ ಡಾಕ್ಟರ್ ಕುಲಾಲ್ ರವರು. ಬಡತನ ಅನುಭವಿಸಿದವರಿಗೆ ಮತ್ತು ಮಾನವೀಯತೆಯ ಅರಿವಿರುವ ಮಹಾನ್ ವ್ಯಕ್ತಿಗಳಿಂದ ಮಾತ್ರ, ಇಂತಹ ಕೈಂಕರ್ಯ ಸಿಗುತ್ತದೆ.
ಸುಮಾರು 16 ವರ್ಷ ದೇವರಾಜ ಅರಸು ಸರಕಾರಿ ಹಾಸ್ಟೆಲ್ ನಲ್ಲಿ ಓದಿ ವೈದ್ಯರಾದವರು. IMA ಕರ್ನಾಟಕದ ನಿಯೋಜಿತ ರಾಜ್ಯ ಉಪಾಧ್ಯಕ್ಷರು.
ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮನಪಾ ಮಂಗಳೂರು ಹಾಗು ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಮಂಗಳೂರಿನ , ಮಂಗಳಾದೇವಿ ಹಾಗು ಪಡೀಲ್ ಪರಿಸರದಲ್ಲಿ ಕಳೆದ 3 ದಶಕಗಳಿಂದ “ಕುಲಾಲ್ ಹೆಲ್ತ್ ಕೇರ್ ಸೆಂಟರ್” ಮತ್ತು “ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್” ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ “ಕನ್ನಡಿಕಟ್ಟೆ”ಗೆ ಇವರದೇ ನೇತೃತ್ವ.

ಸರ್ವಜ್ಞ ವೃತ್ತ ಮಂಗಳೂರು, ರಾಷ್ಟ್ರ ಕವಿ “ಗೋವಿಂದ ಪೈ ವೃತ್ತ”, ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ “ಅಣ್ಣಯ್ಯ ಕುಲಾಲ್”. ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಇವರದ್ದು. , IMA ಕರ್ನಾಟಕ ರಾಜ್ಯದ ಸಕ್ರೀಯ ಸದಸ್ಯರು.
ಮಂಗಳೂರಲ್ಲಿ “ಕುಡ್ಲಂಗಿಪ್ಪ ಕುಂದಾಪ್ರ” ಬಳಗದ ಕ್ರಿಯಾ ಶೀಲ ವ್ಯಕ್ತಿ ಹಾಗೂ ಶಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯೇ ನಮ್ಮ ಕುಲಾಲ್ ಡಾಕ್ಟರ್.
ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ ಇವರೇ.ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಲೇಖನಗಳುಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.
ಇವರು ನಡೆಸುತ್ತಿರುವ, ಸರ್ವಜ್ಞ ಸೆಕೆಂಡ್ ಅಭಿಪ್ರಾಯ ಸೆಂಟರ್, ರೋಗಿಗಳಿಗೆ ತುಂಬಾ ಉಪಕಾರವಾಗುತ್ತಿದೆ. ಕುಂದಗನ್ನಡಿಗರಿಗೆ, ಮಂಗಳೂರಲ್ಲಿ ಸರ್ವ ರೀತಿಯಲ್ಲಿ ಸಹಕಾರಗಳನ್ನು ಕೊಡುತ್ತಾ ಬಂದಿದ್ದಾರೆ.
ಅವರೇ ಹೇಳುವಂತೆ, ಅವರ ತಂದೆಯವರು, ಸಾರಾಯಿ ಅಂಗಡಿಯಲ್ಲಿ ನಡೆಸುತ್ತಿದ್ದ, ಚಕ್ಕುಲಿ ಅಂಗಡಿಯಲ್ಲಿ ಚಕ್ಕುಲಿ ಮಾರಿ, ಕಡು ಬಡತನದಲ್ಲಿ ಬೆಳೆದು ಡಾಕ್ಟರ್ ಆದ ಹುಡುಗ, ಇಂದು ತನ್ನ ತನು ಮನಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ.
ಅವರ ನೇತ್ರಾವತಿ ಉಳಿಸಿ ಹೋರಾಟ, ಪರಿಸರ ಹೋರಾಟ, ಕನ್ನಡ ಪ್ರೀತಿ, ಬರಹ ಗಾರ ವೇದಿಕೆ, ಬರವಣಿಗೆ, ಸಮಾಜಮುಖಿ ಚಿಂತನೆ, ಅವರನ್ನು ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಗೊಳಿಸಿದೆ.
ಇವರು, ಪ್ರತಿಷ್ಠಿತ “ದೇವರಾಜು ಅರಸು” ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವ್ಯಕ್ತಿ.
2025ರ ಮೇ 4 ರಂದು, ಕೋಟಾದ “ಕಾರಂತ ಥೀಮ್ ಪಾರ್ಕ್” ನಲ್ಲಿ ನಡೆಯುವ, “ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ” ದ ಅಧ್ಯಕ್ಷ ಪಟ್ಟ, ನಮ್ಮೂರ “ಕುಂದಾಪ್ರ ಕನ್ನಡ”ದ ನೈಜ ಪ್ರತಿಭೆ, ಹೋರಾಟಗಾರರಾದ ಡಾಕ್ಟರ್ ಅಣ್ಣಯ್ಯ ಕುಲಾಲ್ ರವರಿಗೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.