
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿಧರಲ್ಲಿ ಬಹುತೇಕರು ಸಲಿಂಗಿಗಳು ಎಂಬುದಾಗಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ಹಿನ್ನಲೆಯಲ್ಲಿ ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ. ಯಕ್ಷಗಾನದಲ್ಲಿ ಯಾಕೆ ಮಹಿಳಾ ಕಲಾವಿದರು ಇಲ್ಲ ಎನ್ನುವ ಬಗ್ಗೆ ಎಂಬುದಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.



ಈ ಕುರಿತಂತೆ ಮಾಡಿರುವಂತ ಅವರು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ವಿರುದ್ದ ಯಕ್ಷಗಾನ ಕಲಾವಿದರೊಬ್ಬರು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ ಪೊಲೀಸ್ ಠಾಣೆಯ ಅಧಿಕಾರಿಗಳ ಗೊಂದಲವನ್ನು ನಿವಾರಿಸಿ ಅವರ ಕೆಲಸ ಸುಲಭಗೊಳಿಸುವ ಉದ್ದೇಶದಿಂದ ಕೆಲವು ವಿಷಯಗಳನ್ನು ಅವರ ಗಮನಕ್ಕೆ ತರುತ್ತಿದ್ದೇನೆ ಎಂದಿದ್ದಾರೆ.
ಒಬ್ಬ ವ್ಯಕ್ತಿಯನ್ನು ಕಳ್ಳ, ಸುಳ್ಳ, ವಂಚಕ, ಭ್ರಷ್ಟ, ರೇಪಿಸ್ಟ್ ಎಂದೆಲ್ಲ ಕರೆಯುವುದು ಅಪರಾಧ. ಯಾಕೆಂದರೆ ಈ ಕೃತ್ಯಗಳೆಲ್ಲ ಭಾರತೀಯ ದಂಡ ಸಂಹಿತೆಯಡಿ ಅಪರಾಧಗಳು. ಆದರೆ ಭಾರತದಲ್ಲಿ ಸಲಿಂಗ ಕಾಮ ಅಪರಾಧ ಅಲ್ಲ. 2018ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನವತೇಜ್ ಸಿಂಗ್ ಜೋಹಾರ್ vs ಯೂನಿಯನ್ ಆಫ್ ಇಂಡಿಯಾ ಪ್ರಕರರಣದಲ್ಲಿ ಸಲಿಂಗ ಕಾಮ ಅಪರಾಧ ಎಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿದೆ.


ಅದೇ ತೀರ್ಪಿನಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377ರಲ್ಲಿ ಸಲಿಂಗ ಲೈಂಗಿಕ ಕ್ರಿಯೆಗಳನ್ನು ಅಪರಾಧವೆಂದು ಪರಿಗಣಿಸುತ್ತಿದ್ದ ಭಾಗ ಅಸಾಂವಿಧಾನಿಕ ಎಂದು ಘೋಷಿಸಿದೆ. ಪ್ರಸ್ತುತ ಭಾರತದಲ್ಲಿ ಪರಸ್ಪರ ಒಪ್ಪಿತ ) ಸಲಿಂಗ ಲೈಂಗಿಕ ಸಂಬಂಧಗಳು ಸಂಪೂರ್ಣ ಕಾನೂನುಬದ್ಧ, ಮತ್ತು ಅಪರಾಧ ಅಲ್ಲ.

ಭಾರತದಲ್ಲಿ ಸಲಿಂಗ ಕಾಮ ಅಪರಾಧ ಅಲ್ಲದ ಕಾರಣ ಇಲ್ಲಿನ ಸಲಿಂಗ ಜೋಡಿಗಳಿಗೆ ಮದುವೆಯಾಗುವ ಹಕ್ಕು ಕೂಡಾ ಇದೆ ಎಂದು 2023ರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ಸಲಿಂಗ ಮದುವೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಈ ಬಗ್ಗೆ ಕಾನೂನನ್ನು ರೂಪಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಸಂಸತ್ ಗೆ ನೀಡಿದೆ.
ಹೀಗಿರುವಾಗ ಅಪರಾಧ ಅಲ್ಲದ ಕೃತ್ಯವಾದ ಸಲಿಂಗ ಕಾಮ ಎಲ್ಲೋ ನಡೆಯುತ್ತಿದೆ ಎಂದು ಹೇಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತದೆ? ಒಂದೊಮ್ಮೆ ಯಾವನಾದರೂ ವ್ಯಕ್ತಿ ಬಲತ್ಕಾರದಿಂದ ಇಲ್ಲವೇ ಪ್ರಾಣಿಗಳೊಡನೆ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಐಪಿಸಿ 377ರ ಅಡಿಯಲ್ಲಿ ಅಪರಾಧ ಆಗುತ್ತದೆ.
ಪುರುಷೋತ್ತಮ ಬಿಳಿಮಲೆಯವರು ಯಾವುದಾದರೂ ಒಬ್ಬ ಯಕ್ಷಗಾನ ಕಲಾವಿದನ ಹೆಸರೆತ್ತಿ ಆ ವ್ಯಕ್ತಿ ಬಲಾತ್ಕಾರವಾಗಿ ಸಲಿಂಗ ಕಾಮ ನಡೆಸಿದ್ದಾನೆ ಇಲ್ಲವೇ ಯಾವುದಾದರೂ ಪ್ರಾಣಿಗಳೊಡನೆ ಸಲಿಂಗ ಕಾಮಕ್ರೀಡೆಯಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿದ್ದರೆ ಅದು ಅಪರಾಧವಾಗುತ್ತಿತ್ತು. ಯಕ್ಷಗಾನ ಕಲಾವಿದರಲ್ಲಿ ಸಲಿಂಗ ಕಾಮಿಗಳು ಇದ್ದಾರೆ ಎಂದು ಹೇಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತದೆ? ಯಾರಾದರೂ ಕಾನೂನು ತಜ್ಞರು ಹೇಳಬೇಕು.
ವಾಸ್ತವ ಸಂಗತಿ ಏನೆಂದರೆ ಕಲೆ, ಸಾಹಿತ್ಯ, ರಾಜಕೀಯ, ಮಾಧ್ಯಮ, ಕ್ರೀಡೆ ವೈದ್ಯಕೀಯ, ಎಂಜನಿಯರಿಂಗ್ ಕ್ಷೇತ್ರಗಳು ಸೇರಿದಂತೆ ಯಕ್ಷಗಾನ ರಂಗದಲ್ಲಿಯೂ ಸಲಿಂಗ ಕಾಮಿಗಳಿದ್ದಾರೆ. ಇಷ್ಟು ಮಾತ್ರವಲ್ಲ ಯಕ್ಷಗಾನ ಕ‍್ಷೇತ್ರದಲ್ಲಿ ಉಳಿದೆಲ್ಲ ಕ್ಷೇತ್ರಗಳಂತಯೇ ಜಾತೀಯತೆ, ಲಿಂಗತಾರತಮ್ಯ ಎಲ್ಲವೂ ಇದೆ. ಯಾರು ಒಪ್ಪಿದರೂ ಒಪ್ಪದೆ ಇದ್ದರೂ ಸತ್ಯವನ್ನು ಅಳಿಸಿಹಾಕಲಾಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

