
ಮಂಗಳೂರು : ಡಿಜಿಟಲ್ ಅರೆಸ್ಟ್ ಮಾಡಿ ಮಹಿಳೆಯಿಂದ 42 ಲಕ್ಷ ಸುಲಿಗೆ ಮಾಡಿದ ಪ್ರಕರಣವೊಂದು ಮಂಗಳೂರಿನಲ್ಲಿ ಸಂಭವಿಸಿದೆ. ಮಹಿಳೆ ಅಪರಿಚಿತರು ಕರೆ ಮಾಡಿ 42 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಿದ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ.ಅ.7ರಂದು ತನ್ನ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮುಂಬೈಯ ಕೊಲಾಬ ಪೊಲೀಸ್ ಠಾಣೆಯಿಂದ ತಾನು ಮಾತನಾಡುತ್ತಿರುವೆ. ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಲಾಗಿದೆ. ಬಳಿಕ ತನ್ನನ್ನು ಮುಂಬೈಗೆ ಬರುವಂತೆ ಹೇಳಿದ್ದಾನೆ.


ನನಗೆ ಮುಂಬೈಗೆ ಬರಲು ಆಗುವುದಿಲ್ಲ ಎಂದಾಗ ಅಪರಿಚಿತ ವ್ಯಕ್ತಿಯು ತನ್ನಿಂದ ಪತ್ರ ಬರೆಯಿಸಿಕೊಂಡು ವಾಟ್ಸ್ಆ್ಯಪ್‌ಗೆ ಕಳುಹಿಸುವಂತೆ ಹೇಳಿದ್ದ. ಹಾಗೇ ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿ ಸಿಬಿಐ ಅಧಿಕಾರಿ, ಆರ್‌ಬಿಐ ಮತ್ತು ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಬಗ್ಗೆ ಉಲ್ಲೇಖಿಸಿ ತನ್ನ ವೈಯಕ್ತಿಕ ಹಾಗೂ ಬ್ಯಾಂಕ್ ವಿವರಗಳನ್ನು ಕೇಳಿ ಪಡೆದುಕೊಂಡಿದ್ದ. ನಂತರ ನಾನು ಅ.8ರಿಂದ 17ರ ಮಧ್ಯೆ ಆರೋಪಿಯ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 42,00,150 ರೂ.ವನ್ನು ವರ್ಗಾವಣೆ ಮಾಡಿರುವೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಭಯಗೊಂಡು ತನ್ನ ಮಕ್ಕಳು ಹಾಗೂ ತಂಗಿಗೆ ವಿಚಾರ ತಿಳಿಸಿದೆ. ಆವಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ತನ್ನಿಂದ ಹಣ ಪಡೆದು ವಂಚಿಸಿರುವುದಾಗಿ ಮಹಿಳೆ ಮಂಗಳೂರು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

