
ಧರ್ಮಸ್ಥಳದ ಬಂಗ್ಲಗುಡ್ಡದ ದಟ್ಟ ಕಾಡಿನಲ್ಲಿ ನಡೆಯುತ್ತಿರುವ ಅಸ್ಥಿಪಂಜರ ಉತ್ಖನನ ಕಾರ್ಯವು ರಾಜ್ಯದಾದ್ಯಂತ ಭಾರೀ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ. ಅನಾಮಿಕ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿದ ಬಳಿಕ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಗಂಭೀರ ಪ್ರಕರಣದ ತನಿಖೆಯಲ್ಲಿ ತೀವ್ರವಾಗಿ ತೊಡಗಿದೆ. ಇದೀಗ ಈ ಉತ್ಖನ ಕಾರ್ಯದಲ್ಲಿ ಮತ್ತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಇಂದು ಬಂಗ್ಲಗುಡ್ಡದಲ್ಲಿ ನಡೆಯುತ್ತಿರುವ ಈ ಉತ್ಖನನ ಕಾರ್ಯವು ಊಟದ ಬ್ರೇಕ್ ಇಲ್ಲದೆ ತೀವ್ರಗತಿಯಲ್ಲಿ ನಡೆಯುತ್ತಿದೆ, ಕಾಡಿನಲ್ಲಿ ಕೆಲವು ಅಸ್ಥಿಪಂಜರದ ಭಾಗಗಳು ಮತ್ತು ಮೂಳೆಗಳು ಸಿಕ್ಕಿರುವುದು ತನಿಖೆಗೆ ಹೊಸ ಆಯಾಮವನ್ನು ತಂದಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಅನಾಮಿಕ ವ್ಯಕ್ತಿ ಸದ್ಯ 13 ಜಾಗಗಳನ್ನು ಗುರುತಿಸಿದ್ದ. ಈ ಪೈಕಿ 11 ನೇ ಸ್ಥಳದಲ್ಲಿ ಉತ್ಖನನ ಕಾರ್ಯ ಇಂದು ನಡೆಯಬೇಕಿತ್ತು. ಆದರೆ ಈ ವೇಳೆ ದೂರುದಾರ ಗುಡ್ಡದ ಮೇಲ್ಭಾಗಕ್ಕೆ ಕರೆದೊಯ್ದಿದ್ದು, ಅಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈ ವೇಳೆ ಅಲ್ಲಿ ಕೆಲವು ಮೂಳೆಗಳು ಸಿಕ್ಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅನಾಮಿಕ ತೋರಿಸಿದ ಜಾಗದಲ್ಲಿ ಉತ್ಖನನ ಮುಂದುವರೆದಿದೆ.

