
ಮಹಾರಾಷ್ಟ್ರ : ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ. ಪತ್ನಿ ಗರ್ಭಿಣಿಯಾಗಿದ್ದ ಕಾರಣ ಪಿತೃತ್ವ ರಜೆ ಪಡೆದು ಹುಟ್ಟೂರಿಗೆ ಬಂದಿದ್ರು. ಅತ್ತ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆಗಮನಕ್ಕಾಗಿ ಯೋಧನ ಕುಟುಂಬ ಕಾಯುತ್ತಿತ್ತು. ಆದ್ರೆ, ವಿಧಿಯಾಟ ಬೇರೆಯೇ ಆಗಿತ್ತು.



ಪತ್ನಿಗೆ ಬೇಕಾದ ಅಗತ್ಯ ವಸ್ತುಗಳನ್ನು ತರಲು ಬೈಕ್ ನಲ್ಲಿ ತೆರಳಿದ್ದ ಯೋಧ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ನಡೆದಿರೋದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ. 35 ವರ್ಷದ ಪ್ರಮೋದ್ ಜಾಧವ್ ಮೃತ ಯೋಧ. ಮಿನಿ ಟ್ರಕ್ ಬೈಕ್‌ಗೆ ಡಿಕ್ಕಿಯಾಗಿ ಪ್ರಮೋದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ರುತುಜಾ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ. ಪತಿಗೆ ವಿದಾಯ ಹೇಳಲು ಪುಟ್ಟ ಕಂದಮ್ಮನೊಂದಿಗೆ ಪತ್ನಿ ಸ್ಟ್ರೆಚರ್ ನಲ್ಲಿ ಬಂದ ದೃಶ್ಯ ಕರುಳು ಹಿಂಡುವಂತಿತ್ತು. ಈ ದೃಶ್ಯ ಕಂಡು ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ

