
ಕಾರ್ಕಳ: ತಂತ್ರಜ್ಞಾನ ಮುಂದುವರಿದಂತೆ ಯಾಂತ್ರಿಕ ಜೀವನಕ್ಕೆ ಮನುಷ್ಯ ಒಗ್ಗಿ ಕೊಳ್ಳುತ್ತಾನೆ. ಈ ಜಾಲತಾಣದ ಪ್ರಭಾವದಿಂದ ಜೀವಂತಿಕೆ ಇಲ್ಲದ ಸಂವೇದನಾಶೀಲ ರಹಿತ ಬದುಕು ಯುವ ಪೀಳಿಗೆಯಲ್ಲಿ ಪ್ರಸ್ತುತ ಕಾಣಬಹುದು ಎಂಬ ನೂರಾರು ಸಾಮಾಜಿಕ ಜಾಲ ತಾಣದ ಮೇಲಿನ ಆರೋಪದ ನಡುವೆಯೂ ಕೇವಲ ಜಾಲತಾಣದ ಮುಖಾಂತರ ಕುಲಾಲ ಚಾವಡಿ ವಾಟ್ಸಪ್ ಬಳಗವು ನೂರಾರು ಸಂಕಷ್ಟ ಪೀಡಿತ ಸಮುದಾಯ ಬಾಂಧವರಿಗೆ ಆರ್ಥಿಕ ನೆರವು ನೀಡಿದೆ.


ಬಡತನ ಸಿರಿತನದ ತುಲನೆಯನ್ನು ಬಾಹ್ಯ ದೌಲತ್ತಿಗಿಂತ ಅಂತರ್ಯದ ಸಿರಿವಂತಿಕೆಯಲ್ಲಿ ಕಾಣಬಹುದಾದ ನೂರಾರು ಸಹೃದಯಿ ಚಾವಡಿ ಬಂಧುಗಳಿಂದ ಚಾವಡಿಯಲ್ಲಿ ಬಿತ್ತರವಾದ ಫೋಟೋ ವರದಿಯನ್ನು ಆಧರಿಸಿ ಈ ತನಕ ಲಕ್ಷಾಂತರ ರೂಪಾಯಿ ಹಣ ಹರಿದು ಬಂದಿದೆ. ಇದು ಚಾವಡಿ ತಂಡ ತಮ್ಮ ಬೆನ್ನನ್ನು ಕಟ್ಟಿಕೊಳ್ಳುವ ವಿಷಯ ಖಂಡಿತ ಅಲ್ಲ. ಆದರೆ ಸಮುದಾಯದ ಬಂಧುಗಳಿಗೆ ಚಾವಡಿಯ ಕಾರ್ಯದಕ್ಷತೆಯ ಬಗ್ಗೆ ತಿಳಿಸುವ ಅನಿವಾರ್ಯತೆಗಾಗಿ ಈ ಪ್ರಸ್ತಾಪ ಅಷ್ಟೇ.
ಸರಿ ಸುಮಾರು ಹತ್ತು ವರ್ಷಗಳಿಂದ ಚಾವಡಿ ತಂಡದ ಮೇಲೆ ಸಮುದಾಯ ಬಾಂಧವರು ಇಟ್ಟ ನಂಬಿಕೆಯನ್ನು ಕ್ಷಣ ಕ್ಷಣಕ್ಕೂ ಸಧೃಡ ಗೊಳಿಸುವ ಗಟ್ಟಿ ನಿಲುವನ್ನು ಹೊಂದಿರುವ ಚಾವಡಿ ತಂಡ ದ.ಕ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲೂ ಸಹಾಯ ಹಸ್ತ ಚಾಚುವ ಪ್ರಯತ್ನ ಮಾಡಿದೆ. ನಾವು, ನಿಮ್ಮಿಂದ ಇದು ಸಾದ್ಯ ಅನ್ನುವಂತೆ ಚಾವಡಿ ತಂಡವನ್ನು ಪ್ರೇರೇಪಿಸಿದ ಸಮಸ್ತ ಕಾರುಣ್ಯ ಹೃದಯಗಳಿಗೆ ಕೃತಜ್ಞತಾ ಪೂರ್ವಕವಾಗಿ ತಲೆ ಬಾಗುತ್ತೇವೆ.


ಅನ್ಯರ ದುರಿತಕ್ಕೆ ಮಮ್ಮಲ ಮರುಗುವ ಸಮಸ್ತ ಕಾರುಣ್ಯ ಹೃದಯಗಳನ್ನು ಒಂದೊಮ್ಮೆ ಏಕಕಾಲಕ್ಕೆ ಒಂದೇ ಸೂರಿನಡಿ ಒಗ್ಗೂಡಿಸುವ ಪ್ರಯತ್ನವಾಗಿ ಈ ಕುಲಾಲ ಚಾವಡಿ ಬಳಗದ ಚಾವಡಿ ಸಂಬ್ರಮ

ಕುಲಾಲ ಚಾವಡಿ ಸಂಭ್ರಮ ಆರು
ಇಲ್ಲಿ ನಮ್ಮ ನಿಮ್ಮದೇ ಕಾರು ಬಾರು
ಚಾವಡಿ ಬಂಧುಗಳೇ…
ಆರನೇ ಬಾರಿಯ ಚಾವಡಿ ಸಂಭ್ರಮದ ಕ್ಷಣಗಳು ಸನಿಹವಾಗುತ್ತಿದೆ. ದಿನಾಂಕ 15. 12. 2024ರ ಭಾನುವಾರ ಬೇಲಾಡಿಯಲ್ಲಿ ನಮ್ಮ ನಿಮ್ಮ ಬಹು ನಿರೀಕ್ಷೆಯ ಆರನೇ ಚಾವಡಿ ಸಂಭ್ರಮ ರಂಗೇರುತ್ತಿದೆ.
ವಿಧ ವಿಧದ ಭಕ್ಷ್ಯ ಭೋಜ್ಯಗಳ ಸುಗ್ರಾಸ ಭೋಜನಕ್ಕೆ ಮೃಷ್ಟಾನ್ನ ಅನ್ನುವಂತೆ ಜೀವನ ಜಂಜಾಟದ ಸಂಘರ್ಷಮಯ ಬದುಕಿನಿಂದ ಒಂದೊಮ್ಮೆ ತಲೆ ಕೊಡವಿ ಹಿರಿಕಿರಿಯರಾದಿಯಾಗಿ ಬೆರೆತು ಆಟ ಊಟದಲ್ಲಿ ಕಲೆತು ಮೈ ಮನವ ಚೇತೋಹಾರಿಯಾಗಿಸುವ ಸ್ನೇಹ ಕೂಟವೇ ಈ ಚಾವಡಿ ಸಂಭ್ರಮ.
ವರ್ಷಪೂರ್ತಿ ಆರ್ತರ ಆಸರೆಗೆಂದೆ ಉದಾತ್ತವಾಗುವ ಮನಗಳೆಲ್ಲ ಚಾವಡಿಯ ಚೌಕಟ್ಟಿನಲ್ಲಿ ಒಂದೊಮ್ಮೆ ಬೆರೆತು ಕಲೆತು ಸಂಭ್ರಮಿಸಿ ದುಡಿಮೆಯ ದಣಿವಾರಿಸಿ ಮನತಣಿಯೆ ನಲಿದು ನಗುವ ಸುಸಂದರ್ಭವಿದು.
ಪುಟಾಣಿಗಳಿಗೆ ವಿವಿಧ ವಿನೋದಮಯ ಆಟ ದಂಪತಿಗಳಿಗೆ ಮೋಜಿನ ಆಟ, ಹರೆಯಕ್ಕೊಂದು ಹರುಷದ ಆಟ, ಇದರೊಂದಿಗೆ ಮುಂಜಾನೆಯ ಉಲ್ಲಾಸಕ್ಕೆ ಸ್ವಾದಿಷ್ಟ ಚಹಾವಿದ್ದರೆ ಮದ್ಯಾಹ್ನಕ್ಕೊಂದು ಅಪ್ಪಟ ತೌಳವ ಶೈಲಿಯ (ಪುಂಡಿ ಕೋರಿ ) ಸುಗ್ರಾಸ ಭೋಜನ.
ಆಟ ಊಟದ ಆಯಾಸ ಜಡ ನಿವಾರಣೆಗೆ ಹರಿವ ತೊರೆಯಲ್ಲಿ ನೀರಾಟ ಸಂಜೆಗೊಂದು ಸಮರೋಪ ಇದು ಚಾವಡಿ ಸಂಭ್ರಮದ ಸಂಕ್ಷಿಪ್ತ ರೂಪ.
ಚಾವಡಿ ಬಂಧುಗಳೇ ಬನ್ನಿ
ಮನೆ ಮಂದಿಯ ಕರೆತನ್ನಿ
ಬರುವ ದಾರಿ ಮರೆತಿರೇ..
ಇಲ್ಲಿದೆ ನಿಮಗಾಗಿ :- 9964979640
ಚಾವಡಿ ಗುರಿಕಾರರ ಜಂಗಮವಾಣಿಯ ಅಂಕೆ