
ಮಂಗಳೂರು : ವಿಟ್ಲ -ಮುಡಿಪು ಮಧ್ಯೆ 2 ದಿನಗಳಿಂದ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.


ಒಂದೇ ಟಯರಲ್ಲಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸೊಂದು ಹಿಂದಿನ ಎಡಬದಿ ಟಯರ್ನಲ್ಲಿ ಮಾತ್ರ ಸಂಚರಿಸುತ್ತಿತ್ತು. ಇನ್ನೊಂದು ಟಯರ್ ಒಡೆದು ಕರ್ಕಶ ಶಬ್ದ ಬರುತ್ತಿತ್ತು. ಬಸ್ನ ಚಾಲಕ, ಕಂಡಕ್ಟರ್ ಮುಂಜಾಗ್ರತೆ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
ಮಾ.22 ಮಧ್ಯಾಹ್ನದಿಂದ ಮಾ.23 ಮಧ್ಯಾಹ್ನ ತನಕ ವಿಟ್ಲ – ಮುಡಿಪು – ಮಂಗಳೂರು ಮಧ್ಯೆ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದರೆಂದು ಪ್ರಯಾಣಿಕರೇ ಆರೋಪಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆ ಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಆದಷ್ಟು ಶೀಘ್ರವೇ ಈ ನಿರ್ಲಕ್ಷ್ಯದ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ.

