
ಬಂಟ್ವಾಳದ ಎರಡು ಗ್ರಾಮಗಳಲ್ಲಿರುವ ಮೂರು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ನುಗ್ಗಿರುವ ಕಳ್ಳರು ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದ ಒಳನುಗ್ಗಿರುವ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 3000 ಸಾವಿರ ನಗದು ಕಳವುಗೈದಿದ್ದಾರೆ. ಹಾಗೆಯೇ ಒಳಗಿದ್ದ ಗೊದ್ರೇಜ್ ಬಾಗಿಲು ಮುರಿದು ಅದರೊಳಗಡೆ ಜಾಲಾಡಿ ಅಗತ್ಯ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದ್ದಾರೆ.
ನರಿಕೊಂಬು ಗ್ರಾಮದ ಅಂತರ ಎಂಬಲ್ಲಿ ಸಾಲ್ಯಾನ್ ಕುಟುಂಬದ ತರವಾಡು ದೈವಸ್ಥಾನವಿದೆ. ಈ ದೈವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಸುಮಾರು 1000 ಸಾವಿರ ರೂಪಾಯಿ ನಗದು ಕಳವುಗೈದಿದ್ದಾರೆ.


ಅಲ್ಲದೆ ಬಾಳ್ತಿಲ ಗ್ರಾಮದ ಸುಧೆಕ್ಕಾರು ಎಂಬಲ್ಲಿರುವ ರಕೇಶ್ವರಿ ಗುಳಿಗ ದೈವದ ಗರ್ಭಗುಡಿಯ ಬಾಗಿಲ ಚಿಲಕ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಗರ್ಭಗುಡಿಯೊಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ಕಾಣಿಕೆ ಡಬ್ಬಿ ಒಡೆದು ಹಾಕಿ ಅದರಲ್ಲಿದ್ದ ಹಣ ಮತ್ತು ಭಜನೆಯಿಂದ ಹೊಂದಾಣಿಕೆ ಗೊಂಡ ಒಟ್ಟು 10,000 ನಗದನ್ನು ಕಳ್ಳರು ಎಗರಿಸಿದ್ದಾರೆ. ಜೊತೆಗೆ ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದೊಳಗೆ ನುಗ್ಗಿದ ಕಳ್ಳರು ಅಲ್ಲಿದ್ದ ಡಬ್ಬಿಯನ್ನು ಮುರಿದು ಸುಮಾರು 600 ರೂ ನಗದನ್ನು ದೋಚಿದ್ದಾರೆ ಎನ್ನಲಾಗಿದೆ.

ಈ ನಾಲ್ಕು ಪ್ರಕರಣಗಳ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.