
Read Time:1 Minute, 17 Second
ಬೆಳ್ತಂಗಡಿ : ಕಾಡಾನೆ ದಾಳಿಗೆ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ನಡೆದಿದೆ.


ಬೊಳಿಯಾರು ನಿವಾಸಿ ದಿನೇಶ್ ಎಂಬವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಯೊಂದು ರಸ್ತೆ ಮಧ್ಯೆ ಎದುರಾಗಿದೆ. ಇದನ್ನು ಗಮನಿಸಿ ಆತಂಕಗೊಂಡ ದಿನೇಶ್, ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ.
ಈ ವೇಳೆ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ರಿಕ್ಷಾವನ್ನು ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿದ ವೇಳೆ ಕಾಡಾನೆ ಅರಣ್ಯದತ್ತ ಹೋಗಿದೆ. ರಿಕ್ಷಾದ ಸ್ಥಿತಿ ನೋಡಿ ಕುಸಿದು ಬಿದ್ದ ದಿನೇಶ್ ಅವರನ್ನು ಮನೆ ಮಂದಿ ಕರೆದುಕೊಂಡು ಹೋಗಿ ಉಪಚರಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

