
ಬೆಂಗಳೂರು: ಜೂನ್ ಆರಂಭದಿಂದ ಬೆಂಗಳೂರಲ್ಲಿ ಮುಂಗಾರು (Monson 2024) ಶುರುವಾಗುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರಿಗೆ ನೆರೆಯ ಭೀತಿ (Bengaluru Floods) ಎದುರಾಗಿದೆ. ಈ ಬಾರಿಯೂ ಬಿಬಿಎಂಪಿ ಪ್ರವಾಹ ಉಂಟಾಗಬಹುದಾದ ಜಾಗಗಳ ಗುರುತು ಮಾಡಿದೆ. ಹಾಗಾದ್ರೆ ಬೆಂಗಳೂರಿನ ಎಲ್ಲೆಲ್ಲಿ ನೆರೆ ಭೀತಿ ಇದೆ? ಇದಕ್ಕೆ ಬಿಬಿಎಂಪಿ ತಡೆಗಟ್ಟಿರುವ ಕ್ರಮ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.


ಸದ್ಯ ಬೆಂಗಳೂರಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಜೂನ್ ಆರಂಭದಲ್ಲೇ ಮುಂಗಾರು ಕೂಡ ಪ್ರವೇಶ ಕಾಣುವ ಸಾಧ್ಯತೆ ಇದೆ. ಹೀಗಾಗಿ ಬಿಬಿಎಂಪಿ ಮುಂಗಾರು ತಯಾರಿಗೆ ಮುಂದಾಗಿದೆ. ಈಗ ಎಲ್ಲೆಲ್ಲಿ ನೆರೆಯಾಗುವ ಸಾಧ್ಯತೆ ಇದೆ ಎನ್ನುವ ನಿಟ್ಟಿನಲ್ಲಿ ನಗರದ ಡೇಂಜರ್ ಸ್ಪಾಟ್‌ಗಳನ್ನು ಗುರುತಿಸಿ, ಅಗತ್ಯ ಕ್ರಮಕ್ಕೆ ಸೂಚಿಸಿದೆ. ಬಿಬಿಎಂಪಿ ಪ್ರಕಾರ ನಗರದಲ್ಲಿ 198 ರೈನ್ ಡೇಂಜರ್ ಸ್ಪಾಟ್ ಗಳು ಇವೆಯಂತೆ. ಅತಿಯಾಗಿ ಮಳೆಯಾದರೆ ಈ 198 ಜಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರಲ್ಲಿ 198 ನೆರೆ ಭೀತಿ ಪ್ರದೇಶಗಳು
ಕಳೆದ ವರ್ಷ ಸುರಿದ ಬಾರಿ ಮಳೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗಾರ್ಡನ್ ಸಿಟಿ ಮಾನ ಹರಾಜಾಗಿತ್ತು. ಇದೀಗ ಈ ಬಾರಿ ಮಳೆ ದಿನದಿಂದ ದಿನಕ್ಕೆ ಚುರುಕಾಗ್ತಿದೆ. ಹೀಗಾಗಿ ಈ ಬಾರಿಯೂ ನಗರದಲ್ಲಿ ಪ್ರವಾಹ ಉಂಟಾಗುವ ಆತಂಕ ಮೂಡಿಸಿದೆ. ಹೀಗಾಗಿ ಬಿಬಿಎಂಪಿ 198 ಪ್ರದೇಶವನ್ನು ಪ್ರವಾಹ ಭೀತಿ ಎದುರಿಸಿತ್ತಿದೆ ಎಂದು ಘೋಷಿಸಿದೆ. ಮಹಾದೇವಪುರ, ಬೊಮ್ಮನಹಳ್ಳಿ, ಆರ್‌ಆರ್ ನಗರ ಸೇರಿದಂತೆ 67 ಜಾಗಗಳಲ್ಲಿ ಈಗಾಗಲೇ ತಾತ್ಕಾಲಿಕ ಕ್ರಮ ಪಾಲಿಕೆ ತೆಗೆದುಕೊಂಡಿದೆ. ಇದರ ಜೊತೆಗೆ ರಾಜಕಾಲುವೆ ಸೆನ್ಸಾರ್ ಅಳವಡಿಕೆಯನ್ನೂ ಮಾಡಲಾಗಿದೆ. ಆದರೆ ಪ್ರವಾಹ ಭೀತಿ ಇಲ್ಲದಿದ್ದರೂ ಕೆಲವು ಕಡೆಗಳಲ್ಲಿ ಪಾಲಿಕೆ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ನೆರೆಯಿಂದ ಬೆಂಗಳೂರಿಗೆ ಶಾಶ್ವತ ಪರಿಹಾರ ಇಲ್ವಾ?
2017ರಲ್ಲಿ ಮೊದಲ ಬಾರಿಗೆ ಪಾಲಿಕೆ ಫ್ಲಡ್ ಸರ್ವೇ ನಡೆಸಿ ಬೆಂಗಳೂರಲ್ಲಿ 209 ಪ್ರದೇಶಗಳು ನಿರಂತರ ಪ್ರವಾಹಕ್ಕೆ ತುತ್ತಾಗುತ್ತಿದೆ ಎಂದು ವರದಿ ಕೊಟ್ಟಿತ್ತು. ಇದಕ್ಕೆ ಶಾಶ್ವತ ಪರಿಹಾರ ಕೊಡಲು ಪಾಲಿಕೆ ಈವರೆಗೆ ಕೋಟ್ಯಾಂತರ ಅನುದಾನವನ್ನೂ ವ್ಯಯಿಸಿದೆ. ಅದಾಗಿಯೂ ಪ್ರತಿ ವರ್ಷವೂ ಹೆಚ್ಚು ಕಮ್ಮಿ ಅದೇ ಜಾಗಗಳು ಮತ್ತೆ ಪ್ರವಾಹಕ್ಕೆ ಒಳಗಾಗುತ್ತಿದೆ. ಈ ಬಾರಿಯೂ 198 ಪ್ರದೇಶಗಳು ನೆರೆ ಭೀತಿ ಎದುರಿಸುತ್ತಿದೆ ಎನ್ನುತ್ತಿದೆ. ಒಟ್ಟಾರೆ ಪ್ರತಿ ಮಳೆಗಾಲದಲ್ಲೂ ಪಾಲಿಕೆ ನೆರೆ ಭೀತಿ ಎನ್ನುತ್ತಿದೆಯೇ ಹೊರತು, ಅದಕ್ಕೆ ಶಾಶ್ವತ ಪರಿಹಾರವನ್ನು ಹುಡುಕುತ್ತಿಲ್ಲ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಸರ್ಕಾರವೂ ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸ.
