
ಮಂಗಳೂರು: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡಬಾರದು ಎಂದು ನೀಡಿದ್ದ ಸುತ್ತೋಲೆಯನ್ನು ತುಳುವರ ಆಕ್ರೋಶಕ್ಕೆ ಮಣಿದು ಜಿಲ್ಲಾ ಪಂಚಾಯತ್ ವಾಪಾಸು ತೆಗೆದುಕೊಂಡಿದೆ.


ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆಯಲ್ಲಿ ಚರ್ಚೆ ಮಾಡಬಾರದು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿ ಜಿಲ್ಲಾ ಪಂಚಾಯತ್ ಹೊರಡಿಸಿದ ಸುತ್ತೋಲೆಗೆ ತುಳುವರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಬ್ರಿಜೇಶ್ ಚೌಟ, ಶಾಸಕರು ಮತ್ತು ಜನಸಾಮಾನ್ಯರು ಕೂಡ ಈ ಸುತ್ತೋಲೆಯನ್ನು ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದರು. ಬಳಿಕ ಎಚ್ಚೆತ್ತ ಜಿಲ್ಲಾ ಪಂಚಾಯತ್ ಶನಿವಾರ ಸುತ್ತೋಲೆ ಹಿಂದೆಗೆದುಕೊಂಡು ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಅವರನ್ನು ತುಳು ಸಂಘಟನೆಗಳ ಪ್ರಮುಖರು ಭೇಟಿಯಾಗಿ ಈ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದ್ದರು. ಭಾರಿ ವಿವಾದವಾಗುವ ಮುನ್ಸೂಚನೆ ಸಿಕ್ಕಿದ ಬಳಿಕ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ಸುತ್ತೋಲೆಯನ್ನು ವಾಪಾಸ್ ಪಡೆದಿದೆ.


ತಮಿಳು, ಕನ್ನಡ ಭಾಷೆಗಳಷ್ಟೇ ಪ್ರಾಚೀನವಾದ ಭಾಷೆ ತುಳು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಆಗ್ರಹ, ಹೋರಾಟ ದಶಕಗಳಿಂದ ನಡೆಯುತ್ತಿರುವಾಗಲೇ ಜಿಲ್ಲಾ ಪಂಚಾಯತ್ ಪಂಚಾಯತ್ ಸಭೆಗಳಲ್ಲಿ ತುಳು ಮಾತನಾಡಬಾರದು ಎಂಬ ವಿವೇಚನಾ ರಹಿತ ಸುತ್ತೋಲೆ ಹೊರಡಿಸಿತ್ತು.

ತುಳು ಸಂಘಟನೆಗಳ ಆಗ್ರಹಕ್ಕೆ ಮಣಿದ ಅಧಿಕಾರಿಗಳು ತುಳು ಭಾಷೆ ಬಳಕೆ ನಿಷೇಧದ ಆದೇಶ ನೀಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಹೋರಾಟಗಾರರು ಆ ಆದೇಶ ಹೊರಡಿಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿ ತುಳು ಭಾಷೆಗೆ ಅವಹೇಳನ ಮಾಡಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಏ.22ರಂದು ಹೊರಡಿಸಿದ ಸುತ್ತೋಲೆ ಎರಡು ದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿ ಹಲವು ನಾಯಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.