
ಕಾಸರಗೋಡು: ಕೇರಳ ಕಾಸರಗೋಡಿನ ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ಸೋಮವಾರ ತಡರಾತ್ರಿ ನಡೆದ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಪಟಾಕಿ ಸ್ಪೋಟದಿಂದ ಸಂಭವಿಸಿದ ಭೀಕರ ದುರಂತದಲ್ಲಿ 150 ಮಂದಿ ಗಂಭೀರ ಗಾಯಗೊಂಡಿದ್ದರೆ ಅದರಲ್ಲಿ 8 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.


ಈ ಮಧ್ಯೆ ದುರಂತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಅನೇಕರು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ‘ದೈವ ನರ್ತಕ’ನೇ ತನ್ನ ಪ್ರಾಣವನ್ನು ಒತ್ತೆ ಇಟ್ಟು ಪುಟ್ಟ ಮಗುವನ್ನು ರಕ್ಷಿಸಿದ್ದ ಘಟನೆ ನಡೆದಿದೆ. ತನನ್ನ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ಚೆಂಡಿನ ಮಧ್ಯೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ. ಮಧ್ಯರಾತ್ರಿ
ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ ಇದ್ದ ಪಟಾಕಿ ದಾಸ್ತಾನು ಸಿಡಿಯಲಾರಂಭಿಸಿದಾಗ ಬೆಂಕಿಯ ಉಂಡೆಗಳು ಗಗನಕ್ಕೇರತೊಡಗಿದ್ದುವು, ಇದನ್ನು ನೋಡಿದ ಜನ , ಭಕ್ತರು ಹೆದರಿ ಧಿಕ್ಕಾಪಾಲಾಗಿ ಓಡಿದ್ದಾರೆ. ಈ ಮಧ್ಯೆ ಪುಟ್ಟ ಮಗುವೊಂದು ಬೆಂಕಿಯ ನಡುವೆ ಸಿಕ್ಕಿ ಹಾಕಿಕೊಂಡಿದೆ. ಪಕ್ಕದಲ್ಲೇ ಇದ್ದ ದೈವ ಇದನ್ನು ಗಮನಿಸಿ ಕ್ಷಣ ಮಾತ್ರದಲ್ಲಿ ಧಾವಿಸಿ ಹೋಗಿ ಬೆಂಕಿ ಗೋಳದ ನಡುವಿನಿಂದ ಮಗುವನ್ನು ರಕ್ಷಿಸಿ ಎತ್ತಿಕೊಂಡು ಬಂದಿದೆ. ಅದೃಷ್ಟವಶಾತ್ ಮಗು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದೆ.