
ಮಂಗಳೂರು: ಕುಡ್ಲ ಪ್ರತಿಷ್ಠಾನದ ವತಿಯಿಂದ ಲಾಲ್‌ಬಾಗ್-ಲೇಡಿಹಿಲ್‌ನಲ್ಲಿ ನಡೆಯುತ್ತಿರುವ ಸ್ಟ್ರೀಟ್‌ಫುಡ್ ಫೆಸ್ಟ್ ಗೆ ವೈರಲ್ ಚಾಯ್‌ವಾಲಾ ಡಾಲಿಗೆ ಆಹ್ವಾನ ನೀಡಿದ್ದಕ್ಕಾಗಿ ಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಟೀಕಿಸಿದ್ದಾರೆ. “ಡಾಲಿ ಚಾಯ್‌ವಾಲಾ ಮಂಗಳೂರಿನವರು ಅಲ್ಲದೇ ಇರುವುದು ಖುಷಿಯ ವಿಚಾರ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಬುಲ್ಡೋಝರ್ ಮೂಲಕ ಧ್ವಂಸ ಮಾಡಲಾಗುತ್ತಿತ್ತು” ಎಂದು ಇತ್ತೀಚೆಗಿನ ಟೈಗರ್ ಕಾರ್ಯಾಚರಣೆ ಹೆಸರಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಬುಲ್ಡೋಝರ್ ಬಳಸಿ ತೆರವುಗೊಳಿಸಿರುವ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.


ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯು ಇತ್ತೀಚೆಗೆ ‘ಟೈಗರ್ ಕಾರ್ಯಾಚರಣೆ’ ಹೆಸರಿನಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಓಡಿಸಿತ್ತು. ಇದೀಗ ಅದೇ ಬಿಜೆಪಿ ನಾಯಕರು ಸ್ಟ್ರೀಟ್‌ಫುಡ್ ಫೆಸ್ಟ್ ನಡೆಸುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ.
ರಾಜ್ ಬಿ. ಶೆಟ್ಟಿ ಅವರ ಈ ಹೇಳಿಕೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಆರಂಭವಾಗಿದೆ. ಒಂದೆಡೆ ಫೆಸ್ಟ್‌ಗೆ ಬೆಂಬಲ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ಉದ್ದೇಶದಿಂದ ಈ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

