
ಮಂಗಳೂರು: ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ಅಬ್ದುಲ್ ರಹಿಮಾನ್(34) ಅವರ ಮೃತದೇಹವನ್ನು ಇಂದು ಬೆಳಗ್ಗೆ ಕುತ್ತಾರ್ ಮದನಿ ನಗರದ ಮಸೀದಿಗೆ ಸಾಗಿಸಲಾಯಿತು.


ಈ ವೇಳೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರ ಗುಂಪು ರಸ್ತೆ ತಡೆ ನಡೆಸಿ ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕುತ್ತಾರ್, ತೊಕ್ಕೊಟ್ಟು, ಪಂಪ್ ವೆಲ್ ಮಾರ್ಗವಾಗಿ ಮೃತದೇಹ ಫರಂಗಿಪೇಟೆ ತಲುಪಿದ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದರು
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಸಾರ್ವಜನಿಕರ ಗುಂಪು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ್ದು, ಅಮಾಯಕ ಯುವಕನ ಹತ್ಯೆಯನ್ನು ತೀವ್ರವಾಗಿ ಖಂಡಿಸಿತು. ಆಕ್ರೋಶಿತರ ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.


ರಹಿಮಾನ್ ಅವರ ಮೃತದೇಹವನ್ನು ಬಂಟ್ವಾಳದ ಕೊಳತ್ತಮಜಲಿನಲ್ಲಿರುವ ಮನೆಗೆ ಸಾಗಿಸಲಾಗುತ್ತಿದೆ. ನೂರಾರು ಜನರು ಮೃತದೇಹದ ಆ್ಯಂಬುಲೆನ್ಸ್ ಜೊತೆಗೆ ಸಾಗುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸುತ್ತಿದ್ದಾರೆ.
