
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ ಮಹಿಳೆಯೊಬ್ಬರು 1.65 ಕೋಟಿ ರೂ. ಹಣ ವಂಚನೆಗೊಳಗಾದ ಬಗ್ಗೆ ಮಂಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಇನ್ ಸ್ಟಾಗ್ರಾಂನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ, ಅಂಕಿತ್ ಪಟೇಲ್ ಎಂಬ ಹೆಸರಿನ ಅಪರಿಚಿತ ಅವರ ವಾಟ್ಸ್ಆ್ಯಪ್‌ನಲ್ಲಿ ಚ್ಯಾಟ್ ಮಾಡಿ, ಷೇರ್ ಮಾರ್ಕೆಟ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದ. ಬಳಿಕ Fidelity pearl of south Asia ಎಂಬ ಷೇರುಮಾರುಕಟ್ಟೆ ವಾಟ್ಸ್ಆ್ಯಪ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದನು. ಅದರಲ್ಲಿ ಹೂಡಿಕೆ ಮಾಡುವಂತೆ ಆತ ತಿಳಿಸಿದಂತೆ, ಫಿಡೆಲಿಟಿ ಆ್ಯಪ್ ಡೌನ್‌ಲೋಡ್ ಮಾಡಿ ತನ್ನ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಜೂನ್ 26ರಿಂದ ಜುಲೈ 31ರ ನಡುವೆ ಹಂತಹಂತವಾಗಿ ಒಟ್ಟು 1,65,92,293 ರೂ. ಮೊತ್ತವನ್ನು ವರ್ಗಾವಣೆ ಮಾಡಿದ್ದನು. ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ವೇಳೆ ಮಹಿಳೆಗೆ ಮೋಸದ ಅರಿವಾಗಿದ್ದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ವ್ಯಕ್ತಿ ಹೇಳಿದಂತೆ ಬೇರೆ ಬೇರೆ ಖಾತೆಗಳಿಗೆ IMPS ಮತ್ತು RTGS ಮೂಲಕ ಮಹಿಳೆ ಹಣ ವರ್ಗಾಯಿಸಿದ್ದರು. ಅವರು ಜಮೆ ಮಾಡಿರುವ ಹಣ ಹೂಡಿಕೆ ರೂಪದಲ್ಲಿ ಫಿಡೆಲಿಟಿ ಆ್ಯಪ್‌ನಲ್ಲಿ ತೋರಿಸುತ್ತಿತ್ತು. ಆದರೆ ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯುವ ಅವಕಾಶವಿರಲಿಲ್ಲ. ಅಧಿಕ ಲಾಭದ ಆಸೆ ತೋರಿಸಿ ಮೋಸದ ಬಲೆಗೆ ಕೆಡವಿ ಮತ್ತಷ್ಟು ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ ಎಂದು ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

