
ಧರ್ಮಸ್ಥಳ: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (SIT) ಕೈಗೆತ್ತಿಕೊಂಡಿದ್ದು, ಆರೋಪಕ್ಕೊಳಗಾಗಿರುವವರನ್ನು ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಗೆ ಒಳಗಾಗಿರುವವರಲ್ಲಿ ಒಬ್ಬರಾದ ಉದಯ್ ಜೈನ್, ತಾವು ಯಾವುದೇ ತನಿಖೆಗೂ ಸಿದ್ಧವಿದ್ದು, ಮತ್ತೊಮ್ಮೆ ತಮ್ಮ ಬ್ರೈನ್ ಮ್ಯಾಪಿಂಗ್ ಮಾಡಲು ಕೂಡ ಸಿದ್ಧರಿರುವುದಾಗಿ ತಿಳಿಸಿದ್ದಾರೆ.


ಎಸ್‌ಐಟಿ ಕಚೇರಿಗೆ ಉದಯ್ ಜೈನ್ ಹಾಜರು:
ಸೌಜನ್ಯ ಕುಟುಂಬಸ್ಥರು ಆರೋಪ ಮಾಡಿರುವವರಲ್ಲಿ ಒಬ್ಬರಾದ ಉದಯ್ ಜೈನ್, ಎಸ್‌ಐಟಿ ಕಚೇರಿಗೆ ಹಾಜರಾಗಿದ್ದಾರೆ. “ನಿನ್ನೆ ರಾತ್ರಿ ಎಸ್‌ಐಟಿ ನನಗೆ ಕರೆ ಮಾಡಿ ಇವತ್ತು ವಿಚಾರಣೆಗೆ ಬರುವಂತೆ ಸೂಚಿಸಿತ್ತು. ನಾನು ಯಾವುದೇ ವಿಚಾರಣೆಗೂ ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿಬಿಐ ತನಿಖೆಗೂ ತಾನು ಸಂಪೂರ್ಣ ಸಹಕರಿಸಿರುವುದಾಗಿ ಉದಯ್ ಜೈನ್ ಹೇಳಿದ್ದಾರೆ. “ನಮ್ಮ ಬ್ರೈನ್ ಮ್ಯಾಪಿಂಗ್ ಕೂಡಾ ಆಗಿದೆ. ಮತ್ತೊಮ್ಮೆ ಬ್ರೈನ್ ಮ್ಯಾಪಿಂಗ್ ಮಾಡುವುದಕ್ಕೂ ನಾವು ಸಿದ್ಧರಿದ್ದೇವೆ. ನಮ್ಮ ಬಳಿ ಮಾನನಷ್ಟ ಮೊಕದ್ದಮೆ ಹೂಡಲು ಹಣವಿಲ್ಲ” ಎಂದಿದ್ದಾರೆ. ಅಲ್ಲದೆ, “ಎಸ್‌ಐಟಿ ತನಿಖೆಗೆ ನಾನು ಸಾಯುವವರೆಗೂ ಸಹಕಾರ ನೀಡಲು ಸಿದ್ಧನಿದ್ದೇನೆ. ಈ ಪ್ರಕರಣಕ್ಕೆ ಈಡಿ ಪ್ರವೇಶಿಸಿದ್ದು, ಸತ್ಯ ಹೊರಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

