
ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್, ವಿಚಾರವಾಗಿ ಎರಡು ದಶಕಗಳ ನಂತರ ಆಕೆಯ ತಾಯಿ ಸುಜಾತಾ ಭಟ್ ಎಂಬುವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.


ತಮ್ಮ ವಕೀಲರೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಅವರು, ಎಸ್ಪಿ ಡಾ . ಅರುಣ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ದೂರುದಾರರ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ದಾಖಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಕಚೇರಿ ಪ್ರಕಟಣೆ ತಿಳಿಸಿದೆ.
ದೂರಿನಲ್ಲಿ ಏನಿದೆ?: ನಾಪತ್ತೆ ದೂರು ನೀಡಿರುವ ವಿದ್ಯಾರ್ಥಿನಿ ತಾಯಿ ಸುಜಾತ ಭಟ್ ಮಾತನಾಡಿ, ಮಣಿಪಾಲ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ನನ್ನ ಮಗಳು ಅನನ್ಯಾ ಭಟ್ ತಮ್ಮ ಇಬ್ಬರು ಗೆಳತಿಯರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದರು. ಈ ವೇಳೆ ಸ್ನೇಹಿತೆಯರು ತಮ್ಮ ಬಟ್ಟೆಬರೆ ತರಲು ಹೋಗಿ ಮರಳಿ ಬಂದಾಗ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ. ಅಂದು ಧರ್ಮಸ್ಥಳ ಠಾಣೆಗೆ ದೂರು ದಾಖಲಿಸಲು ಹೋದಾಗ ದೂರು ಸ್ವೀಕರಿಸಿಲ್ಲ. ಇದೀಗ ನನ್ನ ಪುತ್ರಿಯ ನಾಪತ್ತೆ ಬಗ್ಗೆ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ಆಕೆಯ ಮೃತದೇಹ ಪತ್ತೆಯಾಗಿ ಡಿಎನ್ಎ ಮ್ಯಾಚ್ ಆದಲ್ಲಿ, ನಮ್ಮ ಬ್ರಾಹ್ಮಣ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಸಿ ಅವಳ ಅತ್ಮಕ್ಕೆ ಸದ್ಗತಿ ಸಿಗುವಂತೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


ವಕೀಲರೊಂದಿಗೆ ಸುಜಾತಾ ಭಟ್

ಈ ಬಗ್ಗೆ ದ.ಕ ಜಿಲ್ಲಾ ಎಸ್ಪಿ ಕಚೇರಿ ಪ್ರಕಟಣೆಯಲ್ಲಿ ಅನನ್ಯಾ ಭಟ್ ಎಂಬ ಹೆಸರಿನ ವೈದ್ಯಕೀಯ ವಿದ್ಯಾರ್ಥಿನಿಯು 2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಈ ದಿನ ( ಜುಲೈ 15) ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕರಿಗೆ ದೂರು ಅರ್ಜಿ ನೀಡಿರುತ್ತಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು. ದೂರುದಾರರ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ದಾಖಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.