
ಮಂಗಳೂರು : ಇಲ್ಲಿನ ಕಂಕನಾಡಿ ಮಸೀದಿ ಮುಂಭಾಗದ ರಸ್ತೆಯಲ್ಲಿಯೇ ನಮಾಜ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಸೀದಿಯ ಆಡಳಿತ ಮಂಡಳಿಯೇ ವಿಷಾದ ವ್ಯಕ್ತಪಡಿಸಿ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆಂದು ವಿವಾದಕ್ಕೆ ತೆರೆ ಎಳೆದಿದೆ. ಆದರೂ ಪೊಲೀಸರು ಮಾತ್ರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಆಣತಿಯಂತೆ ಶರಣ್ ಪಂಪ್ ವೆಲ್ ಸೇರಿದಂತೆ ವಿ.ಹಿಂ.ಪ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.


ಇದು ಅಕ್ಷಮ್ಯ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಂಗಳೂರು ಪೊಲೀಸ್ ವಿರುದ್ಧ ಮುಗಿಬಿದ್ದ ಬೆನ್ನಲ್ಲೇ, ಪೊಲೀಸ್ ಇಲಾಖೆ ಏಕಪಕ್ಷಿಯವಾಗಿ ನಡೆದುಕೊಂಡು ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಇದೀಗ ಸುಮೋಟೋ ಕೇಸ್ ದಾಖಲಿಸಿರುವ ಇನ್ಸ್ಪೆಕ್ಟರ್ ಅವರಿಗೆ ಕಡ್ಡಾಯ ರಜೆ ಶಿಕ್ಷೆ ವಿಧಿಸಿದೆ. ಅಲ್ಲದೇ, ರಸ್ತೆಯಲ್ಲಿ ನಮಾಜ್ ಮಾಡಿದ್ದನ್ನು ಪ್ರಶ್ನಿಸಿರುವ ಶರಣ್ ಪಂಪ್ ವೆಲ್ ಸೇರಿದಂತೆ ವಿಹಿಂಪ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ.
ಇದು ಜನಸಾಮಾನ್ಯರಿಗೆ ಯಾವ ಸಂದೇಶ ನೀಡುತ್ತಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಹಾಗೂ ಪೊಲೀಸ್ ಇಲಾಖೆಯೇ ಉತ್ತರಿಸಬೇಕು ಎಂದರು. ಸದ್ಯ ಕಾಂಗ್ರೆಸ್ ನಾಯಕರು ಪೊಲೀಸರನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದುಕೊಂಡು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಗೊಂದಲದ ವಾತಾವರಣ ಸೃಷ್ಟಿಸುತ್ತಿದೆ. ಅಲ್ಲದೆ ಎಲ್ಲದಕ್ಕೂ ಹಿಂದೂ ಮುಖಂಡರನ್ನೇ ಹೊಣೆಯಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಇದು ಹೀಗೇ ಮುಂದುವರಿದು ಜನಸಾಮಾನ್ಯರ ಆಕ್ರೋಶದ ಕಟ್ಟೆಯೊಡೆದರೆ ಕಾಂಗ್ರೆಸ್ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ. ಆದ್ದರಿಂದ ಈ ತಕ್ಷಣ ಹಿಂದೂ ಮುಖಂಡರ ಮೇಲೆ ದುರುದ್ದೇಶಪೂರಿತವಾಗಿ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.

