
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಏಜೆನ್ಸಿಯೊಂದು ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದು, 185ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. Hire Glow Elegent overseas international Private Ltd ಎಂಬ ಹೆಸರಿನಿಂದ ವಂಚನೆಗೊಳಗಾದ 185 ಜನ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳ ಜನರೂ ವಂಚನೆಗೆ ಒಳಗಾಗಿದ್ದಾರೆ. ಇದೀಗ ವಂಚನೆಗೊಳಗಾದವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ವಂಚನೆಯ ಕರಾಳ ಮುಖ ಅನಾವರಣಗೊಂಡಿದೆ.


ಮಂಗಳೂರಿನ ಕಂಕನಾಡಿಯಲ್ಲಿ ಕಚೇರಿಯನ್ನು ಹೊಂದಿದ್ದ ಖಾಸಗಿ ಸಂಸ್ಥೆ ನ್ಯೂಜಿಲೆಂಡ್ನ VALARIS ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ದಕ್ಷಿಣಕನ್ನಡ ಜಿಲ್ಲೆಯ 185ಕ್ಕೂ ಹೆಚ್ಚು ಮಂದಿ ಕಂಪನಿಯನ್ನು ಉದ್ಯೋಗಕ್ಕಾಗಿ ಸಂಪರ್ಕಿಸಿದ್ದರು. ಪಕ್ಕದ ಉಡುಪಿ ಜಿಲ್ಲೆ, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಸಂಸ್ಥೆಯನ್ನು ಸಂಪರ್ಕಿಸಿದ್ದರು.
ಸಂಸ್ಥೆಯು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1ಲಕ್ಷದ 85 ಸಾವಿರ ರೂ., ಎಜೆಂಟ್ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ರೂಪಾಯಿ ಹಾಗೂ ಬೇರೆ ಬೇರೆ ರಾಜ್ಯದ ಏಜೆನ್ಸಿಗಳ ಮೂಲಕ ತಲಾ 5ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿರುವ ಆರೋಪ ಸಂಸ್ಥೆಯ ಮೇಲಿದೆ. ಉದ್ಯೋಗಕಾಂಕ್ಷಿಗಳು ಎಲ್ಲಾ ಹಣವನ್ನು ಆನ್ಲೈನ್ ಮುಖಾಂತರವೇ ಹೈರ್ ಗ್ಲೋ ಕಂಪೆನಿಗೆ ಪಾವತಿಸಿದ್ದಾರೆ.

