
ಉಡುಪಿ: ಆನ್ಲೈನ್ ಮೂಲಕ ಉದ್ಯೋಗ ಅನ್ವೇಷಣೆಯಲ್ಲಿದ್ದ ಯುವತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಆರೋಪಿಗಳು ಎಗರಿಸಿದ ಘಟನೆ ನಡೆದಿದೆ. ಉಡುಪಿಯ ರೇಷ್ಮಾ ಅವರನ್ನು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯು ತಾನು ಮೀಡಿಯಾ ಏಜೆನ್ಸಿ ರಿಕ್ರೂಟರ್ ಅನೀಶ ಎಂದು ಪರಿಚಯಿಸಿದ್ದಾನೆ. COIN DCX ಎಂಬ ಸಂಸ್ಥೆ ಎಂದು ಹೇಳಿ ನಂಬಿಸಿ, ದಿನಕ್ಕೆ 5,000 ರೂ. ಗಳಿಸಬಹುದು ಎಂದು ಸಂದೇಶ ಕಳುಹಿಸಿದ್ದಾನೆ. ಇದಕ್ಕೆ ಒಪ್ಪಿದ ರೇಷ್ಮಾ ಅವರು ಆರೋಪಿ ಕಳುಹಿಸಿದ ಲಿಂಕ್ನಲ್ಲಿ ಕೆಲವೊಂದು ಆನ್ಲೈನ್ ಟಾಸ್ಕ್ ಪೂರ್ತಿಗೊಳಿಸಿದ್ದಾರೆ. 3 ಟಾಸ್ಕ್ ಪೂರ್ತಿಗೊಳಿಸಿದಾಗ ರೇಷ್ಮಾ ಅವರ ಬ್ಯಾಂಕ್ ಖಾತೆಗೆ 120 ರೂ. ಜಮೆಯಾಗಿದೆ. ಮುಂದಿನ ಟಾಸ್ಕ್ ಬಗ್ಗೆ ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ಗೆ ಲಿಂಕ್ ಕಳುಹಿಸಿದ್ದು, ಇದನ್ನು ಕ್ಲಿಕ್ ಮಾಡಿದಾಗ ಟೆಲಿಗ್ರಾಮ್ ಆ್ಯಪ್ ಓಪನ್ ಆಗಿದ್ದು, ಅನಂತರ ಅದರಲ್ಲಿ ಯಾರೋ ಅಪರಿಚಿತ ವ್ಯಕ್ತಿ ತನ್ನ ಪರಿಚಯ ಮಾಡಿಕೊಂಡು ಪುನಃ 20 ಟಾಸ್ಕ್ ನೀಡಿದ್ದಾನೆ. ಆರೋಪಿ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ ಮೇರೆಗೆ ರೇಷ್ಮಾ ಅವರು ಹಂತಹಂತವಾಗಿ 5,91,500 ರೂ. ಗಳನ್ನು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ. ಆದರೆ ಆರೋಪಿಗಳು ಉದ್ಯೋಗ ಹಾಗೂ ಪಾವತಿಸಿದ ಹಣವನ್ನು ವಾಪಸ್ ನೀಡದೇ ಮೋಸ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

