ನಿಮ್ಮ ಹಾಗೆ ಡಿಸಿ ಆಗುವೆ ಎಂದ ವಿದ್ಯಾರ್ಥಿನಿ; ತಮ್ಮ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ ! 

0 0
Read Time:4 Minute, 49 Second

ಕಾರವಾರ: ಡಿಸಿ ಆಗಬೇಕೆಂಬ ಗುರಿ ಹೊಂದಿರುವ ವಿದ್ಯಾರ್ಥಿನಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ತಮ್ಮ ಕುರ್ಚಿ ಮೇಲೆ ಕೂರಿಸಿದ ಅಪರೂಪದ ಗಳಿಗೆಗೆ ಜಿಲ್ಲಾಧಿಕಾರಿ ಕಚೇರಿ ಸಾಕ್ಷಿಯಾಯಿತು. ಈ ಮೂಲಕ ಐಎಎಸ್ ಕನಸು ಕಂಡಿರುವ ವಿದ್ಯಾರ್ಥಿನಿಗೆ ಉತ್ತರ ಕನ್ನಡ ಡಿಸಿ ಸ್ಫೂರ್ತಿ ತುಂಬಿದ್ದಾರೆ.

ಗುರುವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದ ಅವರ ಕಚೇರಿಯ ಕೊಠಡಿಗೆ ತೆರಳಿದ್ದರು.

ವಿದ್ಯಾರ್ಥಿನಿಯರೊಂದಿಗೆ ಅವರ ವಿದ್ಯಾಭ್ಯಾಸದ ಬಗ್ಗೆ ಮತ್ತು ಆರೋಗ್ಯದ ಕುರಿತು ವಿಚಾರಿಸಿದ ಜಿಲ್ಲಾಧಿಕಾರಿ, ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ ಎಂದು ಕೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಡಾಕ್ಟರ್, ಲಾಯರ್, ಇಂಜಿನಿಯರ್ ಮತ್ತು ನೌಕಾಪಡೆ ಸೇರುವ ಬಗ್ಗೆ ತಿಳಿಸಿದರು. ಆದರೆ ಅದರಲ್ಲಿದ್ದ ಯಲ್ಲಾಪುರ ಮೂಲದ 8 ನೇ ತರಗತಿ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಮಾತ್ರ ನಾನು ನಿಮ್ಮ ಹಾಗೆ ಡಿಸಿ ಆಗಬೇಕು, ಅದಕ್ಕೆ ಏನು ಓದಬೇಕು ಎಂದು ಜಿಲ್ಲಾಧಿಕಾರಿಗಳನ್ನೇ ಪ್ರಶ್ನಿಸಿದರು.

ಯಾವ ಕಾರಣಕ್ಕೆ ಡಿಸಿ ಆಗಬೇಕು ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿನಿ, ಸಮಾಜದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಬೇಕು, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಆದ್ದರಿಂದ ಡಿಸಿ ಆಗಬೇಕು ಬಾಲಕಿ ಉತ್ತರಿಸಿದ್ದಳು.

ಬಾಲಕಿಯ ಪ್ರಶ್ನೆ ಮತ್ತು ಉತ್ತರದಿಂದ ಅಚ್ಚರಿಗೊಂಡ ಜಿಲ್ಲಾಧಿಕಾರಿಗಳು, ನೀನು ಇನ್ನೂ ಚಿಕ್ಕವಳಿದ್ದೀಯಾ ಈಗಿನಿಂದಲೇ ಚೆನ್ನಾಗಿ ಓದು, ದಿನಪತ್ರಿಕೆಗಳನ್ನು ಓದಿ ಹೆಚ್ಚಿನ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕು. ಪದವಿ ಶಿಕ್ಷಣದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಅಗತ್ಯ ತರಬೇತಿ ಪಡೆದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಆಗ ಡಿಸಿ ಆಗುತ್ತಿಯಾ, ಇದಕ್ಕಾಗಿ ನಿರಂತರವಾಗಿ ಶ್ರಮ ಪಡಬೇಕು ಎಂದು ಸ್ಫೂರ್ತಿ ತುಂಬಿದ್ದಾರೆ.

ಜಿಲ್ಲಾಧಿಕಾರಿಯಾಗುವ ನಿನ್ನ ಕನಸನ್ನು ನನಸು ಮಾಡಿಕೊಳ್ಳಲು ಯಾವುದೇ ಸಂದರ್ಭದಲ್ಲೂ ಇಟ್ಟುಕೊಂಡಿರುವ ಗುರಿಯಿಂದ ಮತ್ತು ನಿರ್ಧಾರಗಳಿಂದ ಹಿಂದೆ ಸರಿಯದಂತೆ ವಿದ್ಯಾರ್ಥಿನಿಗೆ ಕಿವಿಮಾತುಗಳನ್ನು ಹೇಳಿ, ನಿನ್ನ ಕನಸಿಗೆ ನನ್ನಿಂದ ಈಗಿನಿಂದಲೇ ಪ್ರೇರಣೆ ಸಿಗಲಿ ಎಂದು ತಾವು ಕುಳಿತಿದ್ದ ಕುರ್ಚಿಯಿಂದ ಕೆಳಗಿಳಿದು ವಿದ್ಯಾರ್ಥಿಯನ್ನು ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕೂರಿಸಿದರು.

ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತದ್ದ ಬಾಲಕಿಯ ಹಿಂದೆ ನಿಂತ ಜಿಲ್ಲಾಧಿಕಾರಿಗಳು ಪೋಟೋ ತೆಗೆಸಿಕೊಂಡು, ಮುಂದೆ ನಿಜವಾಗಿಯೂ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಆಸೀನವಾಗುವಂತಾಗಲಿ ಎಂದು ಸುದೀಪ್ತ ಶಂಕರ್ ಅತ್ತರವಾಲ್​​ಗೆ ಹಾರೈಸಿದರು. ಇತರೇ ವಿದ್ಯಾರ್ಥಿಗಳಿಗೂ ತಮ್ಮ ಗುರಿ ಸಾಧನೆಗೆ ಸತತವಾಗಿ ಪ್ರಯತ್ನಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತಾಗ ನಿಜಕ್ಕೂ ಹೆಮ್ಮೆ ಎನಿಸಿತು. ನಾನೂ ಜಿಲ್ಲಾಧಿಕಾರಿ ಆಗಿಯೇ ಆಗುತ್ತೀನಿ ಎಂಬ ದೃಢ ನಿರ್ಧಾರ ಮಾಡಿದ್ದೇನೆ ಎಂದು ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಧಿಕಾರಿಯಾಗಲು ಬಯಸಿರುವ ನಮ್ಮ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಅವರಿಗೆ ಇಲಾಖೆಯ ಮೂಲಕ ಮತ್ತು ವೈಯಕ್ತಿಕವಾಗಿ ಸದಾ ಬೆಂಬಲಕ್ಕೆ ನಿಂತು ಅಗತ್ಯವಿರುವ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ತಿಳಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *