
ಹೊಸದಿಲ್ಲಿ: ಬಾಲಿವುಡ್ ನಟ ಸಂಜಯ್ ದತ್ ಅವರ ಮಹಿಳಾ ಅಭಿಮಾನಿಯೊಬ್ಬರು ತಮ್ಮ ನಿಧನಕ್ಕೂ ಮುನ್ನ 72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಉಯಿಲು ಮಾಡಿ ಹೋಗಿರುವುದು ಅಚ್ಚರಿ ಮೂಡಿಸಿದೆ.


‘ರಾಕಿ’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಸಂಜಯ್ ದತ್ 135ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಆರಂಭದ ದಿನಗಳ ವರ್ಚಸ್ಸು ಹಲವಾರು ಹೃದಯಗಳನ್ನು ಗೆದ್ದಿತ್ತು. ಈ ಪೈಕಿ ಓರ್ವ ಮಹಿಳಾ ಅಭಿಮಾನಿಯು ತಾವು ನಿಧನರಾಗುವುದಕ್ಕೂ ಮುನ್ನ ಹಲವಾರು ಕೋಟಿ ಮೌಲ್ಯದ ಆಸ್ತಿಯನ್ನು ಅವರ ಹೆಸರಿಗೆ ಉಯಿಲು ಮಾಡಿ ಹೋಗಿರುವುದು ಅಚ್ಚರಿ ಮೂಡಿಸಿದೆ.
2018ರಲ್ಲಿ ನಟ ಸಂಜಯ್‌ದತ್‌ಗೆ ಪೊಲೀಸರು ಅಭಿಮಾನಿ ನಿಶಾ ಪಟೇಲ್ ಕುರಿತು ಕರೆ ಮಾಡಿ ಈ ವಿಷಯ ತಿಳಿಸಿದ್ದರು. ಆಕೆ ನಿಧನರಾದ ನಂತರ 72 ಕೋಟಿ ರೂ. ಮೌಲ್ಯದ ಆಸ್ತಿ ತನ್ನ ಹೆಸರಿನಲ್ಲಿ ಬಿಟ್ಟು ಹೋಗಿರುವುದು ಸಂಜಯ್ ದತ್ ಗೆ ತಿಳಿಯಿತು. ತನ್ನೆಲ್ಲ ಆಸ್ತಿಯನ್ನು ಸಂಜಯ್ ದತ್ ಗೆ ವರ್ಗಾಯಿಸುವಂತೆ ಆಕೆ ಬ್ಯಾಂಕ್ ಗಳಿಗೆ ಪತ್ರವನ್ನೂ ಬರೆದಿದ್ದರು. ಈ ಸುದ್ದಿ ತಿಳಿದು ಸಂಜಯ್ ದತ್ ಸಂಪೂರ್ಣವಾಗಿ ದಿಗ್ಭ್ರಾಂತರಾಗಿದ್ದರು.


ನಿಶಾ ಪಟೇಲ್ ಯಾರೆಂದೇ ತಿಳಿಯದ ಸಂಜಯ್ ದತ್ ಆಕೆಯ ಆಸ್ತಿಯ ಮೇಲೆ ಹಕ್ಕು ಚಲಾಯಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ಅವರ ವಕೀಲರು ದೃಢಪಡಿಸಿದ್ದಾರೆ.

ಈ ಪರಿಸ್ಥಿತಿಯಿಂದ ನಾನು ತುಂಬಾ ದುಃಖಿತನಾಗಿದ್ದು, ನಾನು ಈ ವಿಷಯದ ಕುರಿತು ಚರ್ಚಿಸಲು ಬಯಸುವುದಿಲ್ಲ ಎಂದು ಸ್ವತಃ ಸಂಜಯ್ ದತ್ ಹೇಳಿದ್ದರು. ನನಗೆ ಆಕೆಯೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕ ಇಲ್ಲ ಎಂದೂ ಅವರು ತಿಳಿಸಿದ್ದರು.
ಸಂಜಯ್ ದತ್ ಬಾಲಿವುಡ್ ಅಲ್ಲದೆ ದಕ್ಷಿಣ ಭಾರತೀಯ ಸಿನಿಮಾಗಳಲ್ಲೂ ನಟಿಸಿದ್ದಾರೆ. 2024ರಲ್ಲಿ ಅವರು ಎರಡು ಪ್ರಮುಖ ಚಿತ್ರಗಳಾದ ಯಶ್ ನಾಯಕತ್ವದ ಕೆಜಿಎಫ್ ಚಾಪ್ಟರ್ 2 ಹಾಗೂ ದಳಪತಿ ವಿಜಯ್ ನಾಯಕತ್ವದ ಲಿಯೊದಲ್ಲಿ ನಟಿಸಿದ್ದರು. ನಟನೆ ಮಾತ್ರವಲ್ಲದೆ, ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಂಜಯ್ ದತ್ ಬಲಿಷ್ಠ ವ್ಯಾವಹಾರಿಕ ಹಿನ್ನೆಲೆಯನ್ನೂ ಹೊಂದಿದ್ದಾರೆ.
ಸಂಜಯ್ ದತ್ ರ ನಿವ್ವಳ ಆಸ್ತಿ ಮೌಲ್ಯ ಸುಮಾರು 295 ಕೋಟಿ ರೂ. ಆಗಿದೆ. ಅವರು ಒಂದು ಚಿತ್ರಕ್ಕೆ 8-15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದು, ಕ್ರಿಕೆಟ್ ತಂಡಗಳ ಸಹ ಮಾಲಕತ್ವವನ್ನೂ ಹೊಂದಿದ್ದಾರೆ. ಅವರು ನವೋದ್ಯಮಗಳಲ್ಲಿ ಹೂಡಿಕೆ ಮಾಡಿದ್ದು, ಸ್ವಂತ ವಿಸ್ಕಿ ಬ್ರ್ಯಾಂಡ್ ಅನ್ನೂ ಹೊಂದಿದ್ದಾರೆ. ಅವರು ಐಷಾರಾಮಿ ಕಾರುಗಳು ಹಾಗೂ ಬೈಕ್ ಗಳೊಂದಿಗೆ ಮುಂಬೈ ಹಾಗೂ ದುಬೈನಲ್ಲಿ ಆಸ್ತಿಗಳನ್ನೂ ಹೊಂದಿದ್ದಾರೆ.