
ಬೆಳ್ಮಣ್ ಇನ್ನಾ ಗ್ರಾಮ ಸಾಂತೂರು ಕೊಪ್ಪಳದ ಶ್ರೀಮತಿ ಮೋಹಿನಿ ಕುಲಾಲರ ಕಡು ಬಡತನದ ಜೀವನ. ಪಾರ್ಶ್ವವಾಯುವಿಗೆ ತುತ್ತಾದ ಪತಿ, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿರುವ ತಾಯಿ, ಅನಾರೋಗ್ಯ ಪೀಡಿತ ಹಿರಿಯಕ್ಕ ಮತ್ತು ಅಪಸ್ಮಾರದಿಂದ ಬಳಲುತ್ತಿರುವ ಅಣ್ಣ ಇದರೊಂದಿಗೆ ಶಾಲೆ ಕಲಿಯುತ್ತಿರುವ ಎರಡು ಹೆಣ್ಣು ಮಕ್ಕಳು.



35 ಸೆಂಟ್ಸ್ ಜಾಗದಲ್ಲಿ ಹುಲ್ಲು ಕಡ್ಡಿಯೂ ಚಿಗುರುದಂತ ಬರಡು ಒಣ ಭೂಮಿಯಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದ ಹಳೆಯ ಮನೆಯಲ್ಲಿ ವಾಸವಾಗಿರುವ ಈ ತುಂಬು ಸಂಸಾರದ ತುತ್ತಿನ ಚೀಲ ತುಂಬಲು ಮೋಹಿನಿಯವರು ಕಟ್ಟುವ ಬೀಡಿಯೇ ಆಧಾರ.
ಈ ನಡುವೆ ಮಕ್ಕಳ ಶಿಕ್ಷಣದ ಖರ್ಚು ಪತಿಯ ಮತ್ತು ತಾಯಿಯ ಔಷದಿ ಖರ್ಚು ಇಡೀ ಸಂಸಾರದ ದಿನಸಿ ಖರ್ಚ ಎಲ್ಲಾ ನಿಬಾಯಿಸಿಕೊಂಡು ಅರೆ ಬಟ್ಟೆ , ಅರೆ ಹೊಟ್ಟೆಯ ಜೀವನ ಸವೆಸಿದರೂ ಎಂದೂ ಯಾರಲ್ಲೂ ಸಹಾಯ ಯಾಚಿಸದ ಪಕ್ಕಾ ಸ್ವಾಭಿಮಾನಿ.
ಬಡವರಿಗಾಗಿಯೇ ಇರುವ ನೂರೊಂದು ಸವಲತ್ತುಗಳು ಮನೆ ಬಾಗಿಲಿಗೇ ಬರುವಂತ ಯೋಜನೆ ಇದ್ದರೂ ಅದರ ಸಮರ್ಪಕ ಸದುಪಯೋಗಕ್ಕೆ ಸರಕಾರಿ ಕಚೇರಿ ಅಲೆದಾಡಲು ಈ ಮನೆಗೆ ಸಮರ್ಥವಾದ ಒಂದು ಗಂಡು ದಿಕ್ಕಿಲ್ಲ. ಮೋಹಿನಿಯವರೇ ತಿರುಗಾಟಕ್ಕೆ ನಿಂತರೆ ಇಡೀ ಸಂಸಾರದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಇವರ ಪಾಲಿಗೆ ಬಡವರ ಯೋಜನೆಗಳು ಊಟಕ್ಕಿಲ್ಲದ ಉಪ್ಪಿನಕಾಯಿಯ ಹಾಗೆ.


ಚಾವಡಿ ಸದಸ್ಯರಾದ ರಾಜೇಶ್ ಕುಲಾಲ್ ಸಾಂತೂರು ಇವರ ಮುತುವರ್ಜಿಯಿಂದ ಕುಲಾಲ ಚಾವಡಿಗೆ ಇವರ ಮಾಹಿತಿ ಸಿಕ್ಕಿದ್ದು ಚಾವಡಿಯ ಸದಸ್ಯರಾದ ಚಂದ್ರು ಬಿದಿರು ಗೋಡು ಇವರು ತನ್ನ ಮಗನ ಹುಟ್ಟುಹಬ್ಬದ ಪ್ರಯುಕ್ತ ನೀಡಿದ ₹5000/- ವನ್ನು ಮೋಹಿನಿಯವರ ಮಕ್ಕಳ ವಿದ್ಯಾರ್ಜನೆಗೆ ಕುಲಾಲ ಚಾವಡಿ ಮೂಲಕ ನೀಡಲಾಯಿತು. ಈ ಸಂದರ್ಭ ರಾಜೇಶ್ ಕುಲಾಲ್ ಸಾಂತೂರು ಇವರು ದಿನಸಿ ಸಾಮಾಗ್ರಿ ನೀಡಿದರೆ, ಸುಧೀರ್ ಬಂಗೇರ ಮಕ್ಕಳಿಗೆ ಸಿದ್ಧ ಉಡುಪುಗಳನ್ನು ನೀಡಿದರು. ಆರ್. ಎಸ್. ಎಸ್ ನ ಜಿಲ್ಲಾ ಸೇವಾ ಪ್ರಮುಖ್ ಗೋಪಾಲಕೃಷ್ಣ ಹೊಸಕೊಪ್ಪ ಶೃಂಗೇರಿ ಇವರು ಆರ್ ಎಸ್ ಎಸ್ ನ ಅಂಗ ಸಂಸ್ಥೆಯಿಂದ ತೀರಾ ಬಡ ಪರಿವಾರದ ಮಕ್ಕಳಿಗಾಗಿಯೇ ಕೊಡ ಮಾಡುವ ಬ್ಯಾಗ್ ಪುಸ್ತಕ ಮತ್ತು ಇನ್ನಿತರ ಪಠ್ಯ ಪರಿಕರವನ್ನು ಒದಗಿಸಿದರು.

ಕುಲಾಲ ಚಾವಡಿಯು ಮೋಹಿನಿ ಕುಲಾಲರ ಕುಟುಂಬದ ಸಂಕಷ್ಟದ ಬಗ್ಗೆ ಮಾಹಿತಿಯನ್ನು ಧ್ವನಿ ಮತ್ತು ದೃಶ್ಯ ಮಾಧ್ಯಮದ ಮೂಲಕ ಪಸರಿಸಿ ಒಂದಿಷ್ಟು ಧನ ಸಹಾಯದ ಒದಗಿಸುವ ಯೋಜನೆ ಹಮ್ಮಿಕೊಂಡಿದೆ. ಸಹಾಯ ಧನ, ದಿನಸಿ ಸಾಮಾಗ್ರಿ ಹಸ್ತಾಂತರ ಸಂಧರ್ಭ ಮುಖ್ಯ ಕಾರ್ಯನಿರ್ವಾಹಕ ಸಂತೋಷ್ ಕುಲಾಲ್ ಪದವು ಸುಧೀರ್ ಬಂಗೇರ ಕೆರ್ವಾಶೆ, ರಾಜೇಶ್ ಕುಲಾಲ್ ಸಾಂತೂರು, ಸತೀಶ್ ಕಜ್ಜೋಡಿ ಮಾಳ, ಭವಾನಿ ಬಂಗೇರ ಕೆರ್ವಾಶೆ, ಮತ್ತು ಜ್ಯೋತಿ ಕುಲಾಲ್ ಪದವು ಉಪಸ್ಥಿತರಿದ್ದರು.