
ಕಾರ್ಕಳ: ಕೆರ್ವಾಶೆಯ ಪಾಲ್ದಾಕ್ಯಾರ್ ಎಂಬಲ್ಲಿ ವಾಸವಾಗಿರುವ ನಾರಾಯಣ ಮೂಲ್ಯರ ಪತ್ನಿ ಶ್ರೀಮತಿ ಲಲಿತಾರವರು ಗರ್ಭದ ಕ್ಯಾನ್ಸರ್ ಸಮಸ್ಯೆಗೆ ತುತ್ತಾಗಿದ್ದು ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಕಿಮೋಥೆರಪಿ ನಂತರ ಒಂದು ಶಸ್ತ್ರ ಚಿಕಿತ್ಸೆ ಕೂಡ ನಡೆದಿದ್ದು ಬಳಿಕ ಮೂರು ಕಿಮೋಥೆರಪಿ ಮಾಡಲಾಗಿದೆ. ಇನ್ನು ಮೂರು ಕಿಮೋಥೆರಪಿ ಆಗಬೇಕು ಎಂದು ವೈದ್ಯರು ಸಲಹೆ ನೀಡಿರುತ್ತಾರೆ. ಸದ್ಯಕ್ಕೆ ಲಲಿತಾರವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು ಸಂತಸದ ಸಂಗತಿ. ಆದರೆ ಆ ದಂಪತಿಗಳ ಬದುಕಿನಲ್ಲಿ ಧೀರ್ಘ ನೆಮ್ಮದಿಯ ನಿಟ್ಟುಸಿರಿಗೆ ಕಾಲವೇ ಉತ್ತರ ನೀಡಬೇಕಾಗಿರುವುದು ದುರಾದೃಷ್ಟ.


ಲಲಿತಾ ಮತ್ತು ನಾರಾಯಣ ಮೂಲ್ಯರಿಗೆ ಮದುವೆಯಾಗಿ ಹತ್ತಾರು ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗಲಿಲ್ಲ. ಪೂಜೆ ಪುನಸ್ಕಾರ, ನೂರೊಂದು ಹರಕೆಗಳು ನಿಷ್ಫಲಗೊಂಡಾಗ ದೈವ ಚಿತ್ತಕ್ಕೆ ತಲೆಬಾಗಿ ನನಗೆ ನೀನು ನಿನಗೆ ನಾನು ಎಂಬ ಅನ್ಯೋನ್ಯತೆಯಲ್ಲಿ ಸಾಮರಸ್ಯದ ಬದುಕಿನಲ್ಲಿ ದಾಂಪತ್ಯ ಜೀವನಕ್ಕೆ ನೈಜ ಅರ್ಥ ಕಲ್ಪಿಸಿದ್ದ ಈ ದಂಪತಿಗಳಿಗೆ ಬಾಳಿಗೆ ವಿಧಿಯ ವಕ್ರನೋಟ ಬಿರು ಬೇಸಿಗೆಯಲ್ಲಿ ಬಡಿದ ಬರ ಸಿಡಿಲಿನಂತೆ.
ಜೀವಕ್ಕೆ ಜೀವವಾಗಿದ್ದ ಅರ್ಧಾಂಗಿಯು ಜೀವಶ್ಚವವಾಗಿ ಪಡುವ ವೇದನೆಯನ್ನು ಕಂಡು ಸಹಿಸಲಾಗದ ನಾರಾಯಣ ಮೂಲ್ಯರು ಸುಮಾರು ಎಂಟು ಲಕ್ಷದಷ್ಟು ಹಣವನ್ನು ಸಾಲ ಸೋಲ ಮಾಡಿ ಮಡದಿಯ ಚಿಕಿತ್ಸೆಗಾಗಿ ಶಕ್ತಿ ಮೀರಿ ವ್ಯಯಿಸಿದರು. ಇನ್ನೂ ಚಿಕಿತ್ಸೆ ಮುಂದುವರಿಯ ಬೇಕಾದ ಕಾರಣ ಒಂದಷ್ಟು ಸಹೃದಯರಲ್ಲಿ ತಮ್ಮ ನೋವನ್ನು ತೋಡಿಕೊಂಡು ಕುಲಾಲ ಚಾವಡಿಗೂ ಮನವಿ ಸಲ್ಲಿಸಿದ್ದರು.
ನಾರಾಯಣ ಮೂಲ್ಯರ ಮನವಿಗೆ ಸ್ಪಂದಿಸಿದ ಚಾವಡಿ ಬಂಧುಗಳು ತಮ್ಮ ಶಕ್ತ್ಯಾನುಸಾರ ಆರ್ಥಿಕ ನೆರವು ನೀಡಿದಾಗ ಒಟ್ಟು ಕ್ರೋಡೀಕರಣ ಗೊಂಡ ಮೊತ್ತ ₹40000/-ವನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಕಳೆದ ಹತ್ತು ವರ್ಷಗಳಿಂದ ಕುಲಾಲ ಚಾವಡಿ ವಾಟ್ಸಪ್ ಬಳಗ ಆಶಕ್ತ, ಸಂಕಟ ಪೀಡಿತ ಬಂಧುಗಳಿಗೆ ಪುಟ್ಟ ಪುಟ್ಟ ಆರ್ಥಿಕ ನೆರವಿನ ಸಹಕಾರದೊಂದಿಗೆ ಆತ್ಮಸ್ಥೈರ್ಯ ತುಂಬುತ್ತಾ ಸಮುದಾಯ ಪರ ಅಳಿಲು ಸೇವೆ ಸಲ್ಲಿಸುತ್ತಿದ್ದು ಈ ಯಶಸ್ಸಿಗೆ ತನು ಮನ ಧನದ ಸಹಕಾರವಿತ್ತ ಸಮಸ್ತ ಚಾವಡಿ ಬಂಧುಗಳಿಗೆ ಹೃನ್ಮನದ ಕೃತಜ್ಞತೆಗಳು.


ವರದಿ:- ಸತೀಶ್ ಕಜ್ಜೋಡಿ
