
ಬೆಳ್ಮಣ್: ಲಕ್ಷಾಂತರ ಹಿಂದೂ ಭಕ್ತರು ಅಯ್ಯಪ್ಪ ದರ್ಶನಕ್ಕಾಗಿ ತೆರಳುತ್ತಿದ್ದು, ಇವರ ಜತೆಗೆ ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ಆಜಿತ್ ಸೆರಾವೋ ಎಂಬ ಕ್ರೈಸ್ತ ಯುವಕನೂ ಯಾತ್ರೆಗೆ ಮುಂದಾಗಿದ್ದಾನೆ.


ದಿ| ವಿಲಿಯಂ ಸೆರಾವೋ, ದುಲ್ಸಿನ್ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಓರ್ವನಾದ ಅಜಿತ್ ನದ್ದು ಎಲೆಕ್ಟ್ರಿಕಲ್ ವೃತ್ತಿ. 18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಿ ದರು. ಕೊರೊನಾ ಸಂದರ್ಭ ದಲ್ಲೂ ಅಯ್ಯಪ್ಪನ ದರ್ಶನ ತಪ್ಪಿಸಲಿಲ್ಲ. ಅಜಿತ್ ಹಿಂದಿನ 17 ವರ್ಷಗಳಲ್ಲಿ 5 ಬಾರಿ ದಟ್ಟ ಕಾನನ ದಾರಿಯಲ್ಲಿ ಸಾಗಿ ಅಯ್ಯಪ್ಪನ ದರ್ಶನ ಮಾಡಿದರು. ತಂದೆ ತೀರಿಕೊಂಡ ವರ್ಷ ಮಾಲೆ ಧರಿಸಿರಲಿಲ್ಲ.
ತನ್ನ ಈ ಪುಣ್ಯ ಕಾರ್ಯಕ್ಕೆ ಮನೆಯವರು, ನೆರೆಹೊರೆಯವರು ಸಹಿತ ಎಲ್ಲ ಧರ್ಮದವರ ಬೆಂಬಲವಿದೆ. ಅಯ್ಯಪ್ಪನ ಮೇಲಿನ ಅಚಲ ವಿಶ್ವಾಸ ನನ್ನದು. ವ್ರತ ನಿಷ್ಠರಾಗಿ, ವ್ಯಸನ ಮುಕ್ತನಾಗಿ ಬದುಕಲು ಈ ಮಾಲೆ ಪೂರಕ ಎನ್ನುತ್ತಾರೆ ಅಜಿತ್ ಸೆರಾವೋ. ಮಕರ ಜ್ಯೋತಿಯಂದು ಅಜಿತ್ ಅಯ್ಯಪ್ಪನನ್ನು ಕಣ್ತುಂಬಿಕೊಳ್ಳುವರು.

