
Read Time:1 Minute, 23 Second
ಪುತ್ತೂರು: ಲಕ್ಕಿ ಡ್ರಾದಲ್ಲಿ ಮೊಬೈಲ್ ಬಹುಮಾನವಿದೆ ಎಂಬ ಅಪರಿಚಿತನ ಮಾತನ್ನು ನಂಬಿ ಪುಣಚದ ಕೂಲಿ ಕಾರ್ಮಿಕರೊಬ್ಬರು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಸಂತ್ರಸ್ತ ಕೂಲಿ ಕಾರ್ಮಿಕರ ಮೊಬೈಲ್ಗೆ ಅಪರಿಚಿತನೊಬ್ಬ ಕರೆ ಮಾಡಿ ತಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ತಮಗೆ ಮೊಬೈಲ್ ಬಹುಮಾನ ಬಂದಿದೆ. ವಿಳಾಸ ಕಳುಹಿಸಿದ್ದಲ್ಲಿ ಮೊಬೈಲ್ ತಲುಪಿಸುತ್ತೇವೆ ಎಂದು ತಿಳಿಸಿದ್ದಾನೆ. ಆದರೆ ಅವರು ತನಗೆ ಮೊಬೈಲ್ ಬೇಡ ಎಂದು ಹೇಳಿ ಕರೆ ಕಡಿತ ಮಾಡಿದ್ದರು. ಆದರೆ ಮತ್ತೆ ಕರೆ ಮಾಡಿದ ಅಪರಿಚಿತ ಕೂಲಿ ಕಾರ್ಮಿಕರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ. ಮರುದಿನ ಕರೆ ಮಾಡಿದ ಆತ ನೀವು ಹೇಳಿದ ವಿಳಾಸಕ್ಕೆ ಮೊಬೈಲ್ ಕಳುಹಿಸಿದ್ದು, ಅಂಚೆಯಿಂದ ನೀವು ಪಡೆದುಕೊಳ್ಳಬೇಕಾದರೆ 1,600 ರೂ. ಪಾವತಿಸುವಂತೆ ಆತ ಹೇಳಿದ್ದ. ಅದರಂತೆ ಹಣ ಪಾವತಿಸಿ ಪಾರ್ಸೆಲ್ ಪಡೆದುಕೊಂಡಾಗ ಅದರಲ್ಲಿ ಹಾಳಾದ ಮೊಬೈಲ್ವೊಂದರ ಬಿಡಿಭಾಗ ಮಾತ್ರ ಇತ್ತು. ಅನಂತರ ಅವರಿಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ.

