
ಉಡುಪಿ: ಒಳ ಮೀಸಲಾತಿ ವಿಚಾರದಲ್ಲಿ ವಿನಾಕಾರಣ ಆಯೋಗ ರಚನೆ ಮಾಡಲಾಗಿದ್ದು, ಇದು ಸಿದ್ದರಾಮಯ್ಯ ಸರ್ಕಾರದ ಅನಗತ್ಯ ನಿರ್ಧಾರ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ,ನಮ್ಮ ಸರ್ಕಾರ ಇದ್ದಾಗ ಒಳ ಮೀಸಲಾತಿ ಜಾರಿಗೆ ತರಲು ನಿರ್ಧಾರ ಕೈಗೊಂಡಿದ್ದೆವು. ಆಗ ರಾಜ್ಯ ಸರ್ಕಾರಕ್ಕೆ ಅಧಿಕೃತವಾದ ಅಧಿಕಾರ ಇರಲಿಲ್ಲ. ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕೆಂಬ ನಿಯಮ ಇತ್ತು. ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಒಳ ಮೀಸಲಾತಿ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ. ಆದರೆ ಈಗ ಮತ್ತೊಂದು ಆಯೋಗ ರಚನೆ ಮಾಡುವ ಅವಶ್ಯಕತೆ ಏನಿದೆ? ಇದು ಕಾಲಹರಣ ಮಾಡಲು ಸರ್ಕಾರ ಕೈಗೊಂಡ ನಿರ್ಧಾರ. ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ಪ್ರವೃತ್ತಿ ಕೈಬಿಟ್ಟು ಸಿದ್ದರಾಮಯ್ಯನವರು ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಹಿಂದಿನ ಸರಕಾರ ಕೈಗೊಂಡಿರುವ ನಿರ್ಧಾರವನ್ನು ಜಾರಿ ಮಾಡುತ್ತೇವೆ ಎನ್ನಬೇಕು. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿದೆ. ತಕ್ಷಣ ನಿರ್ಧಾರ ತೆಗೆದುಕೊಂಡು ಒಳ ಮೀಸಲಾತಿ ಜಾರಿಗೆ ತನ್ನಿ ಎಂದು ಕೋಟ ಒತ್ತಾಯ ಮಾಡಿದ್ದಾರೆ.

