
Read Time:1 Minute, 19 Second
ಮಂಗಳೂರು: ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರವು ದಿ.ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಕಾರದಲ್ಲಿ ನೀಡುವ 2024–25ನೇ ಸಾಲಿನ ಬಾಬು ಕುಡ್ತಡ್ಕ ಪ್ರಶಸ್ತಿಗೆ ಯಕ್ಷಗಾನದ ಸ್ತ್ರೀ ವೇಷಧಾರಿ, ಪ್ರಸಂಗ ಕರ್ತೃ ಎಂ.ಕೆ. ರಮೇಶ ಆಚಾರ್ಯ ಆಯ್ಕೆಯಾಗಿದ್ದಾರೆ.



ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಸೆ.29ರಂದು ಸಂಜೆ 4 ಗಂಟೆಗೆ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವಸ್ತಿಕ್ ಕಲಾ ಕೇಂದ್ರದ ಕಾರ್ಯದರ್ಶಿ ಕೆ.ಸಿ. ಹರೀಶ್ಚಂದ್ರ ರಾವ್ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಂತರ ಬಿಕರ್ನಕಟ್ಟೆಯ ಪ್ರಮೀತ ಕಲಾವಿದರು, ಚಂದ್ರಶೇಖರ ಕರ್ಕೇರ ರಚಿಸಿರುವ, ವಸಂತ್ ಅಮೀನ್ ನಿರ್ದೇಶನದ ‘ಎಂಚಿತ್ತಿನಾಯೆ ಎಂಚಾಯೆ’ ಎಂಬ ತುಳು ಪರದೆ ನಾಟಕ ಪ್ರದರ್ಶಿಸುವರು ಎಂದರು. ಸಂಸ್ಥೆಯ ಅಧ್ಯಕ್ಷ ಅಶೋಕ್ ಜಾಧವ್, ಗೌರವಾಧ್ಯಕ್ಷ ಬಿ.ಪ್ರಕಾಶ್ ಪೈ, ಪ್ರಮುಖರಾದ ಉಷಾಕುಮಾರಿ, ಚಂದ್ರಕಲಾ, ಉಮೇಶ್ ಇದ್ದರು.