
ಉಡುಪಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಸೂಚನೆ ನೀಡಿದ್ದರಿಂದ ಸಿದ್ದರಾಮಯ್ಯ ಅವರು ಯಾವುದೇ ಹುದ್ದೆಯಲ್ಲಿ ಇರಬಾರದು. ತಕ್ಷಣವೇ ರಾಜೀನಾಮೆ ನೀಡಿ, ತನಿಖೆ ಆಗುವ ತನಕ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಯಬೇಕು ಎಂದು ಮಾಜಿ ಸಚಿವ, ಶಾಸಕ ವಿ ಸುನೀಲ್ ಕುಮಾರ್ ಆಗ್ರಹಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯಪಾಲರನ್ನು ಪ್ರಶ್ನೆ ಮಾಡುವ ಕಾಂಗ್ರೆಸ್ ಮುಂದೆ ನ್ಯಾಯಾಲಯದ ನಿಲುವು ಪ್ರಶ್ನೆ ಮಾಡುವ ಭಂಡತನ ತೋರಬಹುದು ಎಂದರು.
ಸಿಎಂ ರಾಜೀನಾಮೆ ನೀಡದಿದ್ದರೆ ಒಂದೆರೆಡು ದಿನದಲ್ಲಿ ಬಿಜೆಪಿ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದ ಅವರು, ಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಾಗ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಿದ್ದರು, ಸಾಂವಿಧಾನಿಕ ಹುದ್ದೆಯನ್ನು ಬುಡಮೇಲು ಮಾಡಲಿದ್ದಾರೆ ಎಂದರು.

ರಾಜ್ಯಪಾಲರನ್ನು ಅನಾವಶ್ಯಕ ಟೀಕೆ ಮಾಡಬಾರದು. ಅವರು ಕಾನೂನು ತಜ್ಞರ ಅಭಿಪ್ರಾಯ ಪಡೆದು ಈ ನಿರ್ಧಾರ ಮಾಡಿದ್ದಾರೆ. ನಿಮಗೆ ಸರಿ ಇದ್ದಾಗ ಸಂವಿಧಾನ ಒಳ್ಳೆಯದು, ನಿಮ್ಮ ಮೇಲೆ ಆರೋಪ ಬಂದಾಗ ವಿಧಾನ ಒಳ್ಳೆಯದಲ್ಲ ಎಂಬ ಕಾಂಗ್ರೆಸ್ ನಿಲುವು ಸರಿಯಲ್ಲ. ರಾಜ್ಯದಲ್ಲಿ ಪ್ರತಿಭಟನೆಯ ಬಹುದೊಡ್ಡ ದಿನಗಳು ಬರಲಿದೆ ಎಂದು ಸುನೀಲ್ ಕುಮಾರ್ ಹೇಳಿದರು.


