
ಮಂಗಳೂರು : ಮಳೆಯಿಂದ ತೀವ್ರ ಹಾನಿಗೊಳಗಾದ ದ.ಕ.ಜಿಲ್ಲೆಗೆ ರಾಜ್ಯ ಸರಕಾರ 300ಕೋಟಿಗೂ ಅಧಿಕ ಪ್ಯಾಕೇಜ್ ಘೋಷಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು. ನಗರದ ಅಟಲ್ ಕೇಂದ್ರದಲ್ಲಿ ಮಾತನಾಡಿದ ಅವರು, ಮನೆ ಸಂಪೂರ್ಣ ಹಾನಿಯಾದಾಗ ಹಿಂದೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರಕಾರವು ಎನ್‌ಡಿಆರ್‌ಎಫ್‌ನ 1.20 ಲಕ್ಷ ಅನುದಾನಕ್ಕೆ 3.80ಲಕ್ಷ ಸೇರಿಸಿ 5ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಅದೇ ರೀತಿ ಭಾಗಶಃ ಹಾನಿಗೆ ಎನ್‌ಡಿಆರ್‌ಎಫ್‌ನ 50ಸಾವಿರ ಅನುದಾನಕ್ಕೆ ಸೇರಿಸಿ 2-3 ಲಕ್ಷ ಅನುದಾನ ನೀಡುತ್ತಿತ್ತು. ಇದೀಗ ಮಳೆ ಬಂದು ತಿಂಗಳ ಬಳಿಕ ಉಸ್ತುವಾರಿ ಸಚಿವರು ಪ್ರತ್ಯಕ್ಷರಾಗಿದ್ದಾರೆ. ಈವರೆಗೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ರಾಜ್ಯ ಸರಕಾರ ದುಪ್ಪಟ್ಟು ಹಣ ಕೊಡದಿದ್ದರೂ ಬೇಡ, ಎನ್‌ಡಿಆರ್‌ಎಫ್‌ನ ಹಣವನ್ನು ಕೇಂದ್ರಕ್ಕಾಗಿ ಕಾಯದೆ ರಾಜ್ಯ ಸರಕಾರದ ಬೊಕ್ಕಸದಿಂದಲೇ ಕೊಡಬೇಕು. ಆ ಬಳಿಕ ಆ ಹಣ ಕೇಂದ್ರದಿಂದ ಬರುತ್ತದೆ ಎಂದರು. ಒಂದು ಕಡೆಯಿಂದ ಹಗರಣಗಳ ಸರಮಾಲೆಯಲ್ಲಿಯೇ ರಾಜ್ಯ ಸರಕಾರ ಸಿಲುಕಿಕೊಂಡಿದೆ. ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿ ನಾಲ್ಕು ತಿಂಗಳಾಯಿತು. ಸರಕಾರ ಬಂದು ಒಂದು ತಿಂಗಳಾದರೂ ದ.ಕ.ಜಿಲ್ಲೆಗೆ ಒಂದೇ ಒಂದು ರೂ. ಅನುದಾನ ಬಂದಿಲ್ಲ. ಒಟ್ಟಾರೆ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು.

