
ಬೆಂಗಳೂರು : ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ಮುಂದಾದ ರಾಜ್ಯ ಸರ್ಕಾರದ ನಡೆ ವಿರೋಧಿಸಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿ ಕಾರಿದ್ದಾರೆ. ಈ ಕುರಿತು ಮಾತನಾಡಿರುವ ಟಿ.ಎ ನಾರಾಯಣಗೌಡ, ಕರ್ನಾಟಕದ ನೆಲದಲ್ಲಿ ಕೋಟ್ಯಂತರ ರೂ. ಆದಾಯ ಮಾಡಿದ್ದೀರಾ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದೀರಿ. ಬೇರೆ ರಾಜ್ಯಕ್ಕೆ ಕಂಪನಿಗಳನ್ನು ಸ್ಥಳಾಂತರ ಮಾಡುತ್ತೇವೆ ಅಂತಾ ಹೇಳ್ತಾರೆ. ಬೇರೆ ರಾಜ್ಯಗಳಲ್ಲಿ ಸ್ಥಳೀಯ ಭಾಷಿಕರಿಗೆ ಮೀಸಲಾತಿ ಕೇಳಲ್ವಾ? ಯಾವುದೇ ಬ್ಲ್ಯಾಕ್ಮೇಲ್ ಗೆ ಹೆದರಬೇಡಿ ಅಂತಾ ಸಿಎಂಗೆ ಹೇಳುತ್ತೇವೆ. ನಾವು ಕನ್ನಡಿಗರು ನಿಮ್ಮ ಜೊತೆಗಿದ್ದೇವೆ ಎಂದು ತಿಳಿಸಿದರು. ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದ ಮಸೂದೆಗೆ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಟಿ.ಎ ನಾರಾಯಣಗೌಡ, 15 ದಿನಗಳ ಗಡುವು ನೀಡುತ್ತೇವೆ. ಅಷ್ಟರೊಳಗೆ ವಿಧೇಯಕ ಮಂಡನೆಗೆ ನಿರ್ಣಯ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ದಂಗೆ ಏಳಲು ಕರೆ ನೀಡುತ್ತೇವೆ. ಜುಲೈ 25ರಂದು ಸಂಘಟನೆಯ ಸಭೆ ಕರೆದಿದ್ದೇವೆ. ಮುಂದಿನ ನಡೆ ಕುರಿತಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.

