
ಮಂಗಳೂರು: ಉಳ್ಳಾಲ ಕಾಪಿಕಾಡಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಫೆ.1ರಿಂದ 6ರವರೆಗೆ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಂಗಳೂರಿನ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದ ಬಳಿಕ ಹೊರೆಕಾಣಿಕೆ ಕೇಂದ್ರವನ್ನು ಉದ್ಘಾಟಿಸಲಾಯಿತು.




ಶರವು ಕ್ಷೇತ್ರದ ಶಿಲೆ ಶಿಲೆ ಮೊಕ್ತೇಸರ ಶರವು ರಾಘವೇಂಧ್ರ ಶಾಸ್ತ್ರಿಗಳು ಗಣಪತಿ ದೇವರ ಮುಂಭಾಗದಲ್ಲಿ ಪ್ರಾರ್ಥನೆ ನೆರವೇರಿಸಿ ಪ್ರಸಾದ ವಿತರಣೆ ಮಾಡಿದರು. ಮಂಗಳೂರು ಭಾಗದ ಜನತೆಗೆ ಹೊರೆಕಾಣಿಕೆ ಅರ್ಪಣೆ ಮಾಡಲು ಅನುಕೂಲವಾಗುವಂತೆ ಕ್ಷೇತ್ರ ವಠಾರದಲ್ಲಿ ಹೊರೆಕಾಣಿಕೆ ಕೇಂದ್ರವನ್ನು ರಾಘವೇಂದ್ರ ಶಾಸ್ತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿ ಎಲ್ಲಾ ಕಾರ್ಯಕ್ರಮಗಳು ಫಲಪ್ರದವಾಗಲೆಂದು ಹರಸಿದರು.

ಇದೇ ವೇಳೆ ಕ್ಷೇತ್ರದ ಕುರಿತು ವಿವರಣೆ ನೀಡುವ ವಾಹನಕ್ಕೆ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಫೆ.1ರಂದು ಸಂಜೆ 3.30ಕ್ಕೆ ಶರವು ದೇವಳದ ಆವರಣದಿಂದ ಮಂಗಳೂರು ವಿಭಾಗದಿಂದ ಉಮಾಮಹೇಶ್ವರಿ ಕ್ಷೇತ್ರಕ್ಕೆ ಹೊರೆ ಕಾಣಿಕೆ ಹೊರಡಲಿದೆ. ಎಲ್ಲರೂ ಈ ಪುಣ್ಯಕಾರ್ಯದಲ್ಲಿ ಕೈಜೋಡಿಸಬೇಕು. ಇದು ಯಶಸ್ವಿಯಾಗಲಿ ಎಂದರು. ಇದನ್ನೂ ಓದಿ: ಫೆ.14ರಂದು ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ ಸ್ವಾಗತಿಸಿ, ಹೊರೆಕಾಣಿಕೆ ಕುರಿತು ವಿವರಣೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ, ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ ಜೆ ಶೇಖರ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ರವಿಶಂಕರ ಮಿಜಾರು, ಉಮಾಮಹೇಶ್ವರಿ ಕ್ಷೇತ್ರದ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.



