
ಬಂಟ್ವಾಳ : ವಾಹನವೊಂದಕ್ಕೆ ಬ್ಯಾಂಕ್ನಿಂದ ತೆಗೆದ ಲಕ್ಷಾಂತರ ರೂ. ಸಾಲ ಮರುಪಾವತಿಸದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಫೋರ್ಜರಿ ಸಹಿಯನ್ನು ಲೆಟರ್ ಹೆಡ್ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ದೂರು ದಾಖಲಾಗಿದೆ.



ಮೂಲತಃ ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವನ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ವೀರ್ ಅಶೋಕ್ ಲೇಲ್ಯಾಂಡ್ ಕಂಪನಿಯ ಲಾರಿ ಖರೀದಿಸಲು 2023 ಮಾ.16ರಂದು ಬ್ಯಾಂಕ್ ಆಫ್ ಬರೋಡದ ಉಪ್ಪಿನಂಗಡಿ ಶಾಖೆಯಿಂದ ತಾಯಿ ನೆಬಿಶಾ ನೀಡಿದ ಜಾಮೀನು ಮೇಲೆ 45 ಲಕ್ಷ ರೂ ಸಾಲವನ್ನು ಪಡೆದಿದ್ದ. ಆರೋಪಿ ತನ್ವೀರ್ 2024ರ ಆ.22 ರಂದು ಜುನೈದ್ ಮೆಲ್ಕಾರ್ಗೆ ಜಿಪಿಎ (ಜನರಲ್ ಫವರ್ ಅಫ್ ಎಟರ್ನಿ)ಯ ಮೂಲಕ ವಾಹನದ ಜವಬ್ದಾರಿ ನೀಡಿದ್ದಾನೆ.
2024 ರ ಡಿ.16ರಂದು ತನ್ವೀರ್ ಬ್ಯಾಂಕಿನ ಅಧಿಕಾರಿಯ ಪೋರ್ಜರಿ ಸಹಿಯನ್ನು ಬ್ಯಾಂಕಿನ ಲೆಟರ್ ಹೆಡ್ನ ಅಡಿಯಲ್ಲಿ ತಯಾರಿಸಿ ಅದರಲ್ಲಿ ಬ್ಯಾಂಕ್ ಆಫ್ ಬರೋಡ ಉಪ್ಪಿನಂಗಡಿ ಶಾಖೆಯಲ್ಲಿರುವ ವಾಹನದ ಸಾಲ ಸಂಪೂರ್ಣ ಸಂದಾಯವಾಗಿರುತ್ತದೆ ಮತ್ತು ಪತ್ರದ ಆಧಾರದಲ್ಲಿ ಆರ್.ಟಿ.ಒ. ಬಂಟ್ವಾಳ ಕಚೇರಿಯಲ್ಲಿ ಋಣಭಾರವನ್ನು ತೆಗೆದು ಹಾಕಬಹುದು ಎಂದು ದೃಡಪತ್ರವನ್ನು ಬ್ಯಾಂಕ್ಗೆ ವಂಚಿಸಿ, ಅರ್.ಟಿ.ಒ ಬಂಟ್ವಾಳಕ್ಕೆ ನೀಡಿದ್ದಾನೆ.


ಆರ್.ಟಿ.ಒ.ಬಂಟ್ವಾಳ ಕಚೇರಿಯಿಂದ ಸಿಕ್ಕಿದ ನಿರಾಪೇಕ್ಷಣಾ ಪತ್ರ ಪಡೆದ ಆಧಾರದಂತೆ ರಮೀಝ್ ಆಲಿಶ್ ಪೂರ್ವನಿರ್ಧರಿತ ಷಡ್ಯಂತ್ರವನ್ನು ಮಾಡಿ ಅವನ ಹೆಸರಿಗೆ ಲಾರಿಯನ್ನು ವರ್ಗಾವಣೆಯನ್ನು ಮಾಡಿಕೊಂಡಿರುತ್ತಾನೆ. ಈ ಎಲ್ಲ ವಂಚನೆಯನ್ನು ನಾಲ್ಕು ಮಂದಿ ಸೇರಿ ಮಾಡಿರುವ ಕಾರಣಕ್ಕಾಗಿ ನಾಲ್ವರ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ವಂಚನೆ ಪ್ರಕರಣ ದಾಖಲಿಸಲಾಗಿದೆ.


