
ಪುತ್ತೂರು: ಎರಡು ವಾಹನಗಳಲ್ಲಿ ಸುಮಾರು 106 ಕೆಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.



ಬೆಳ್ತOಗಡಿ, ಚಾರ್ಮಾಡಿ ಗ್ರಾಮದ ನಿವಾಸಿಗಳಾದ ರಫೀಕ್ ಪಿ.(37) ಮತ್ತು ಅಬ್ದುಲ್ ಸಾದಿಕ್ (37) ಬಂಧಿತ ಆರೋಪಿಗಳು. ಬಂಧಿತರಿOದ ಎರಡು ವಾಹನಗಳಲ್ಲಿದ್ದ 106 ಕೆಜಿ ಮತ್ತು 160 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಅವುಗಳ ಮೌಲ್ಯ 53.03 ಲಕ್ಷ ರೂಪಾಯಿ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಕಾರು ಮತ್ತು ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಜ.19ರಂದು ಸಂಜೆ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ.


ಈ ವೇಳೆ ಆರೋಪಿ ರಫೀಕ್ ಪಿ. ಚಲಾಯಿಸುತ್ತಿದ್ದ ಕಾರಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿಗಳಿದ್ದ ಕಟ್ಟುಗಳು ಪತ್ತೆಯಾಗಿವೆ. ಸಾದಿಕ್ ಚಲಾಯಿಸುತ್ತಿದ್ದ ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ 106 ಕೆಜಿ, 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿದೆ. ಅವುಗಳ ಒಟ್ಟು ಅಂದಾಜು ಮೌಲ್ಯ 53,03,000 ರೂಪಾಯಿ ಎಂದು ಎಸ್ಪಿ ತಿಳಿಸಿದ್ದಾರೆ.

ಆರೋಪಿಗಳು ಗಾಂಜಾ ಸೊಪ್ಪುಗಳನ್ನು ಕೇರಳ, ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ. ಸಾಗಾಟಕ್ಕೆ ಬಳಸಿರುವ ವಾಹನಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:09/2026, ಕಲಂ: 8(c), 20(b)(ii)C NDPS Act-1985ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಗುಣಪಾಲ ಜೆ., ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ, ವಿನೋದ್ ಅವರನ್ನು ಒಳಗೊಂಡ ತಂಡ ಭಾಗವಹಿಸಿದೆ.

