
ಮೂಡುಬಿದಿರೆ: ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಫ್ಲೇಮ್ ಫೈಯರ್ ಮೀಡಿಯಾ ಪ್ರೊಡಕ್ಷನ್’ ವತಿಯಿಂದ ಮುಂಬಯಿನಲ್ಲಿ ಆಯೋಜಿಸಲಾಗಿದ್ದ ‘ಮಿಸ್ ಟೀನ್ ಗ್ಯಾಲಟಿಕ್ ಯುನಿವರ್ಸ್ ಆಫ್ ಇಂಡಿಯಾ-2026’ (ಸೀಸನ್-2) ಸ್ಪರ್ಧೆಯಲ್ಲಿ ಮೂಡುಬಿದಿರೆಯ ಪ್ರತಿಭೆ ಪೂರ್ವಿ ಏಕನಾಥ ಕುಲಾಲ್ ಅವರು ‘ಸೌತ್ ವಿನ್ನರ್’ ಆಗಿ ಹೊರಹೊಮ್ಮುವ ಮೂಲಕ ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.




ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಗೂ ನಿರ್ದೇಶಕ ಸೂರಜ್ ಮೊನಿ ಅವರ ನೇತೃತ್ವದಲ್ಲಿ ನಡೆದ ಅದ್ಧೂರಿ ಸ್ಪರ್ಧೆಯಲ್ಲಿ, 14 ವರ್ಷದ ಪೂರ್ವಿ ಅವರು ದಕ್ಷಿಣ ಭಾರತದ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಪೂರ್ವಿ ಅವರು ಮೂಡುಬಿದಿರೆಯ ಏಕನಾಥ ಕುಲಾಲ್ ಮತ್ತು ಗಾಯತ್ರಿ ಕುಲಾಲ್ ದಂಪತಿಯ ಪುತ್ರಿಯಾಗಿದ್ದಾರೆ. ಇವರು ಕೇವಲ ಸೌಂದರ್ಯ ಸ್ಪರ್ಧೆಯಲ್ಲದೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಆಲ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್‌ನಲ್ಲಿ ಪೂರ್ವಿ ಅವರು ಈ ಹಿಂದೆ ‘ಶ್ರೀ ಮಂಜುನಾಥ್ ನ್ಯಾಷನಲ್ ಅವಾರ್ಡ್’ ಪಡೆದಿದ್ದರು. 2025ರಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ‘ಮಿಸ್ ಕ್ವೀನ್ ಕರಾವಳಿ-2025’ ಸ್ಪರ್ಧೆಯಲ್ಲೂ ವಿಜೇತರಾಗಿದ್ದರು. ಪೂರ್ವಿ ಅವರಿಗೆ ಭವಿಷ್ಯದಲ್ಲಿ ಒಬ್ಬ ಸುಪ್ರಸಿದ್ಧ ಕ್ಲಾಸಿಕಲ್ ಡಾನ್ಸರ್ ಮತ್ತು ಮಾಡೆಲ್ ಆಗಬೇಕೆಂಬ ದೊಡ್ಡ ಕನಸಿದೆ.

