
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಪ್ರದೇಶದಿಂದ ಮುಂಜಾನೆ 4 ಗಂಟೆ ಸುಮಾರಿಗೆ ನಾಪತ್ತೆಯಾದ ಬಾಲಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.



ಮೃತ ಬಾಲಕನನ್ನು ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂದು ಗುರುತಿಸಲಾಗಿದೆ. ಸುಮಂತ್ ಸೇರಿದಂತೆ ಮೂವರು ಬಾಲಕರು ಪ್ರತಿದಿನ ಮುಂಜಾನೆ 4 ಗಂಟೆ ಸುಮಾರಿಗೆ ಬೆಳ್ತಂಗಡಿ ಕಳಿಯ ಗ್ರಾಮದ ನಾಳ ದೇವಸ್ಥಾನದಲ್ಲಿ ನಡೆಯುವ ಧನುಪೂಜೆಗೆ ತೆರಳುತ್ತಿದ್ದರು.
ಇಂದು(ಜ.14) ಮುಂಜಾನೆ 4 ಗಂಟೆ ಸುಮಾರಿಗೆ ಸುಮಂತ್ ಮನೆಯಿಂದ ಹೊರಟಿದ್ದನು. ಆದರೆ ಆತ ನಿರ್ದಿಷ್ಟ ಸಮಯಕ್ಕೆ ದೇವಸ್ಥಾನಕ್ಕೆ ತಲುಪದ ಕಾರಣ ಇತರ ಇಬ್ಬರು ಬಾಲಕರು ಆತನಿಗಾಗಿ ಕಾಯದೆ ದೇವಸ್ಥಾನಕ್ಕೆ ತೆರಳಿದ್ದರು. ನಂತರ ಸಂಶಯಗೊOಡ ಬಾಲಕರು ಸುಮಂತ್ ಮನೆಯವರಿಗೆ ಕರೆ ಮಾಡಿದಾಗ, ಆತ ಮುಂಜಾನೆಯೇ ದೇವಸ್ಥಾನಕ್ಕೆ ಹೋಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ.


ಆದರೆ ಸುಮಂತ್ ದೇವಸ್ಥಾನಕ್ಕೆ ಬಂದಿಲ್ಲ ಎಂಬ ಮಾಹಿತಿ ತಿಳಿದ ಬಳಿಕ ಕುಟುಂಬಸ್ಥರು ಆತಂಕಗೊOಡು ಸ್ಥಳೀಯರಿಗೆ ವಿಷಯ ತಿಳಿಸಿದರು. ಬಾಲಕ ಬರುವ ದಾರಿಯ ಸಮೀಪದ ಕೆರೆಯ ಬಳಿ ರಕ್ತದ ಕಲೆಗಳು ಕಂಡುಬOದ ಹಿನ್ನೆಲೆಯಲ್ಲಿ ಪೊಲೀಸರು, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಸುಮಾರು 11.30 ರ ವೇಳೆಗೆ ಸುಮಂತ್‌ನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಾಲಕನ ತಲೆಯ ಭಾಗದಲ್ಲಿ ಗಂಭೀರ ಗಾಯಗಳಿರುವುದು ಕಂಡುಬOದಿದ್ದು, ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಾಪುರ ಮಠ, ಸಬ್ ಇನ್ಸ್ಪೆಕ್ಟರ್ ಆನಂದ್ ಎಂ., ತಹಶೀಲ್ದಾರ್ ಪೃಥ್ವಿ ಸಾನಿಕಂ, ಆರ್‌ಐ ಪಾವಡಪ್ಪ, ಬಿಇಒ ತಾರಕೇಶ್ವರಿ, ಆಡಳಿತಾಧಿಕಾರಿಗಳು, ಶಾಲಾ ಶಿಕ್ಷಕರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

