
ಮಂಗಳೂರು : 10 ತಿಂಗಳ ಮಗುವಿನ ಶ್ವಾಸನಾಳದಲ್ಲಿ ಕಡಲೆ ಬೀಜ ಸಿಲುಕಿ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿತ್ತು. ಇದೀಗ ಮಗುವನ್ನು ರಕ್ಷಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ. ಮನೆಯಲ್ಲಿ ಆಟವಾಡುತ್ತಿರುವಾಗ ಮಗು ಕಡಲೆ ಬೀಜ ಸೇವಿಸಿತ್ತು. ಆದರೆ, ಅದು ಶ್ವಾಸನಾಳದಲ್ಲಿ ಸಿಲುಕಿದ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ. ದಿನ ಕಳೆಯುತ್ತಿದ್ದಂತೆ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿದೆ. ಪೋಷಕರು ಶೀತ ಸಮಸ್ಯೆ ಎಂದು ಭಾವಿಸಿ ಪುತ್ತೂರಿನ ಡಾ.ಶ್ರೀಕಾಂತ್ ರಾವ್ ಬಳಿ ತಪಾಸಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಎಕ್ಸ್ ರೇ ತೆಗೆದಾಗ ಮಗುವಿನ ಶ್ವಾಸನಾಳದಲ್ಲಿ ವಸ್ತು ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದರು. ಕೂಡಲೇ ಮಗುವನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ.ಸ್ವಾತಿ ರಾವ್, ಇಎನ್‌ಟಿ ಸರ್ಜನ್ ಡಾ.ಗೌತಮ್ ಕುಲಮರ್ವ ಹಾಗೂ ಅರಿವಳಿಕೆ ತಜ್ಞರಾದ ಡಾ. ಸುನಿಲ್ ಮತ್ತು ಡಾ. ಫ್ರೀಡಾ ಅವರ ತಂಡ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.



ಡಾ. ಸ್ವಾತಿ ರಾವ್ ತಪಾಸಣೆ ಮಾಡಿದಾಗ ಮಗುವಿನ ಸ್ಥಿತಿ ಗಂಭೀರ ಆಗಿರುವುದು ಗೊತ್ತಾಗಿದೆ. ಮಗುವಿನ ಆಕ್ಸಿಜನ್ ಸ್ಯಾಚುರೇಶನ್ 88 ಕ್ಕೆ ಕುಸಿದಿತ್ತು. ಸಿಟಿ ಸ್ಕ್ಯಾನ್‌ನಲ್ಲಿ ಮಗುವಿನ ಬಲ ಶ್ವಾಸನಾಳದಲ್ಲಿ ಚಿಕ್ಕದೊಂದು ವಸ್ತು ಸಿಲುಕಿರುವುದು ಪತ್ತೆಯಾಗಿತ್ತು. ಮಗುವನ್ನು ತತ್‌ಕ್ಷಣ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ವೈದ್ಯರ ತಂಡ ತುರ್ತು ಬೊಂಕೊಸ್ಕೋಪಿಕ್ ವಿಧಾನ ಕೈಗೊಳ್ಳುವ ಮೂಲಕ ಶ್ವಾಸಕೋಶದಲ್ಲಿ ಸಿಲುಕಿದ್ದ ಕಡಲೆ ಬೀಜದ ತುಣುಕನ್ನು ಯಶಸ್ವಿಯಾಗಿ ಹೊರ ತೆಗೆದು ಮಗುವನ್ನು ರಕ್ಷಿಸಿದೆ.

