
ಮಂಗಳೂರು: ಕುಲಾಲ ಸಮುದಾಯವು ತಲೆತಲಾಂತರಗಳಿಂದ ಮಹಾನ್ ಸಾಧಕರನ್ನು ನೀಡಿರುವ ದಿವ್ಯ ಸಮುದಾಯವಾಗಿದ್ದು, ಎಲ್ಲ ಸಮುದಾಯಗಳ ಪ್ರೀತಿ ಮತ್ತು ಸ್ವೀಕಾರವನ್ನು ಪಡೆದಿದೆ. ನಮ್ಮದು ಎಂಬ ಭಾವನೆ ಮೂಡಿದಾಗಲೇ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆ ಸಾಧ್ಯ. ಕಲೆ, ಸಂಸ್ಕೃತಿ ಮತ್ತು ಆಚಾರಗಳ ಪಾಲನೆ ಅಗತ್ಯವಿದ್ದು, ಪೂರ್ವಜರ ಆದರ್ಶಗಳನ್ನು ಅನುಸರಿಸಿ ಇನ್ನಷ್ಟು ಸೇವಾಕಾರ್ಯಗಳನ್ನು ಕೈಗೊಳ್ಳಬೇಕು. ಹುಟ್ಟುಸಾವಿನ ನಡುವಿನ ಜೀವನದಲ್ಲಿ ಧರ್ಮ ಹಾಗೂ ಕರ್ತವ್ಯ ಪ್ರಜ್ಞೆ ಅತ್ಯಂತ ಮುಖ್ಯವಾದುದು ಎಂದು ಶ್ರೀ ಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು




ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ.ಕ. ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ಜರಗಿದ ಕುಂಭ ಕಲಾವಳಿ-ಕುಲಾಲ ಕಲಾ ಸೇವಾಂಜಲಿಯ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಮಣ್ಣಿನ ಅಸ್ಮಿತೆ ಹಾಗೂ ಶಕ್ತಿಯ ಮೇಲೆ ಅಪಾರ ನಂಬಿಕೆ ಹೊಂದಿರುವವರು ಕುಲಾಲರು. ಈ ಮಣ್ಣು ಅಪಾರ ಸಾಧ್ಯತೆಗಳ ಸಾಗರವಾಗಿದ್ದು, ಅದಕ್ಕೆ ರೂಪ ನೀಡುವುದು ಕುಲಾಲ ಸಮುದಾಯವಾಗಿದೆ. ಧರ್ಮದ ಹಾದಿಯಲ್ಲಿ ಸಾಧನೆ ಸಾಧ್ಯವೆಂಬುದನ್ನು ತಮ್ಮ ಜೀವನ ಮತ್ತು ಕಾರ್ಯಗಳಿಂದ ತೋರಿಸಿದ್ದಾರೆ. ರಾಷ್ಟ್ರೀಯತೆ ಹಾಗೂ ಹಿಂದುತ್ವದ ಪರವಾಗಿ ಸದಾ ನಿಂತಿರುವ ಕುಲಾಲರು ನೆಲದ ಪರಂಪರಾಗತ ಕೌಶಲಗಳ ಪ್ರತೀಕವಾಗಿದ್ದು, ಇವರ ಅಪೂರ್ವ ಕೌಶಲ ಮುಂದಿನ ಪೀಳಿಗೆಗೆ ಸಾಗಬೇಕು. ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳೊಂದಿಗೆ ಕುಂಬಾರರ ಕೌಶಲ ಜೋಡಿಸಿಕೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.


ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕುಲಾಲ ಸಮಾಜವು ಪ್ರಾಮಾಣಿಕತೆಯ ಪ್ರತೀಕವಾಗಿದ್ದು, ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಸಮಾಜ ಮತ್ತು ದೇಶಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಈ ಹಿಂದೆ ಸ್ಥಾಪಿಸಲಾಗಿದ್ದ ಕುಂಭನಿಗಮವನ್ನು ಈಗ ನಿರ್ಲಕ್ಷಿಸಲಾಗುತ್ತಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸುತ್ತೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಮಾಜದ ಸಂಘಟನಾತ್ಮಕ ಕಾರ್ಯಗಳ ಸಂದರ್ಭದಲ್ಲಿ ಎಲ್ಲರೂ ಸಮಾಜದ ಜೊತೆಗೆ ದೃಢವಾಗಿ ನಿಲ್ಲಬೇಕು. ವೃತ್ತಿ ಆಧಾರಿತ ಸಮುದಾಯಗಳಲ್ಲಿ ಅಪಾರ ಶಕ್ತಿಯಿದ್ದು, ಸ್ವ ಉದ್ಯೋಗವನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಯುವ ಸಮುದಾಯವು ಉದ್ಯಮಗಳನ್ನು ನಿರ್ಮಿಸಿ ತಮ್ಮ ಸಮಾಜಕ್ಕೆ ಶಕ್ತಿ ತುಂಬುವತ್ತ ಮುಂದಾಗಬೇಕು ಎಂದರು.
ಅಖಿಲ ಭಾರತ ಕುಂಬಾರರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ ಮಾತನಾಡಿ, ಸಮಾಜವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು
ಜಿಲ್ಲೆಯೆಲೆಡೆಯಿಂದ ಆಗಮಿಸಿದ ೧೨ ತಂಡಗಳು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದವು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅನುರಾಗ್ ಬಂಗೇರ ನಿರೂಪಿಸಿದರು. ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ.ಕ. ಜಿಲ್ಲಾಧ್ಯಕ್ಷ ಅನಿಲ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕುಂಬಾರರ ಮಹಾಸಭಾದ ರಾಜ್ಯಾಧ್ಯಕ್ಷ ನಿತ್ಯಾಭರಣ ಚೌಡ ಶೆಟ್ಟಿ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಎ.ಮೂಲ್ಯ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ್ ಮೂಲ್ಯ, ಬೆಂಗಳೂರು ಶಿಲ್ಪಾ ಪ್ರೊಡಕ್ಟ್ಸ್ ಮಾಲೀಕ ರಮೇಶ್ ಬಾಳೆಹಿತ್ಲು, ಬೆಂಗಳೂರು ಸೌಂದರ್ಯ ವಿದ್ಯಾಸಂಸ್ಥೆಯ ಚೇರ್ಮೆನ್ ಸೌಂದರ್ಯ ಮಂಜಪ್ಪ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಆಶಾಲತಾ ದಾಸ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ರಾಜ್ಯಾಧ್ಯಕ್ಷ ಸುಧಾಕರ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಜಲ್, ಕೋಶಾಧಿಕಾರಿ ರವಿ ಕುಲಾಲ್, ಕಾರ್ಯಕ್ರಮ ಸಂಯೋಜಕ ರಾಧಾಕೃಷ್ಞ ಬಂಟ್ವಾಳ, ರಾಜ್ಯ ಮಹಿಳಾ ಸಂಚಾಲಕಿ ಭಾರತಿ ಸೇಸಪ್ಪ ಬಂಟ್ವಾಳ, ಜಿಲ್ಲಾ ಸಂಚಾಲಕಿ ಸುಲೋಚನಿ ಟೀಚರ್ ಕೊಲ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಸ್ವಾಗತಿಸಿದರು. ಜಯಂತ್ ಸಂಕೊಳಿಗೆ ವಂದಿಸಿದರು. ಎಚ್.ಕೆ. ನಯನಾಡು ಮತ್ತು ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.
ಕುಲಾಲ ಸಿಂಧೂರ ಪುರಸ್ಕಾರ, ಸಹಾಯಹಸ್ತ, ಪ್ರೋತ್ಸಾಹ ಧನ:
ಬಿ.ಎಸ್. ಕುಲಾಲ್ ಪುತ್ತೂರು(ಸಹಕಾರ ಸಿಂಧೂರ), ಸೀತಾರಾಮ ಬಂಗೇರ ಕೊಲ್ಯ(ಧರ್ಮ ಸಿಂಧೂರ), ಚಂದಪ್ಪ ಮೂಲ್ಯ ಉಪ್ಪಿನಂಗಡಿ(ಸೇನಾ ಸಿಂಧೂರ), ಸುನಿಲ್ ಆರ್. ಸಾಲ್ಯಾನ್(ಸೇವಾ ಸಿಂಧೂರ), ಪುರುಷೋತ್ತಮ ಕಲ್ಬಾವಿ(ಧಾರ್ಮಿಕ ಸಿಂಧೂರ), ಡಾ. ಎಂ. ಅಣ್ಣಯ್ಯ ಕುಲಾಲ್(ವೈದ್ಯ ಸಿಂಧೂರ), ಚಿದಂಬರ ಬೈಕಂಪಾಡಿ(ಮಾಧ್ಯಮ ಸಿಂಧೂರ), ಸಾವಿತ್ರಿ ಮಹಾಬಲ ಹಾಂಡ(ಮಾತೃ ಸಿಂಧೂರ), ಗಿರೀಶ್ ಕೆ.ಎಚ್. ವೇಣೂರು(ಶಿಕ್ಷಣ ಸಿಂಧೂರ), ವಿಠಲ್ ಕುಲಾಲ್(ಉದ್ಯಮ ಸಿಂಧೂರ) ರವರಿಗೆ ಕುಲಾಲ ಸಿಂಧೂರ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ್ ಮಂಗಳೂರು ವತಿಯಿಂದ ನಾನಾ ವಿಧಾನ ಸಭಾ ಫಲಾನುಭವಿ ಬಡಕುಟುಂಬಗಳಿಗೆ ಸಹಾಯಧನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಹಾಗೂ ಅಶಕ್ತರಿಗೆ ಆರ್ಥಿಕ ಸಹಾಯ ವಿತರಿಸಲಾಯಿತು.
ಪದಗ್ರಹಣ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ :
ಬೆಳಗ್ಗೆ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜವನ್ನು ಗಟ್ಟಿಗೊಳಿಸಲು ಬೇಕು. ಅದರೊಂದಿಗೆ ವಿದ್ಯೆ ಪಡೆಯುದರ ಮೂಲಕ, ಎಲ್ಲ ಜನಾಂಗದ ವರನ್ನು ಆಕರ್ಷಿಸುವಂತಾಗಬೇಕು ಎಂದರು. ಮುಳಿಯ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ರವಿ ಎನ್., ಮಾಣಿಲಶ್ರೀ ಗಳು ಆಶೀರ್ವದಿಸಿ ಶುಭ ಹಾರೈಸಿದರು. ಸಮಿತಿಯ ನೂತನ ಅಧ್ಯಕ್ಷ ಹಾಗೂ ಪಧಾದಿಕಾರಿಗಳ ಪದಗ್ರಹಣ ನಡೆಯಿತು. ಗಂಗಾಧರ ಬಂಜನ್ ಸ್ವಾಗತಿಸಿದರು. ಜಯಗಣೇಶ್ ಕುಲಾಲ್ ದಾಸಕೋಡಿ ವಂದಿಸಿದರು.
ವರದಿ : ಧನುಷ್ ಕುಲಾಲ್ ಶಕ್ತಿನಗರ

