
ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಪ್ರದೇಶದಲ್ಲಿ ಸುಲಿಗೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗಾರಗುಡ್ಡೆ ನಿವಾಸಿ ಅಬೂಬಕ್ಕರ್ ಅವರಿಂದ ಸುಲಿಗೆ ಪಡೆಯುವ ಉದ್ದೇಶದಿಂದ ಮೂವರು ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.



ಅಬೂಬಕ್ಕರ್ ಅವರ ಬಳಿ ಮೂರು ಜೋಡಿ ಎಮ್ಮೆ, ಐದು ಹಾಲು ಹಸುಗಳು ಹಾಗೂ ಇನ್ನಿತರ ಎತ್ತು–ಎಮ್ಮೆಗಳನ್ನು ಹೊಂದಿದ್ದು, ಇತ್ತೀಚೆಗೆ ಅವರ ಎಮ್ಮೆಗಳು ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದವು. ಇದನ್ನೇ ಗುರಿಯಾಗಿಸಿಕೊಂಡು, ಪಕ್ಕದ ಗ್ರಾಮದ ಮೂವರು ಆರೋಪಿಗಳು ಸುಲಿಗೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಸುಲಿಗೆ ಸಂದರ್ಭ ಅಬೂಬಕ್ಕರ್ ಅವರ ತಂದೆ ಶಂಶುದ್ದೀನ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ತಕ್ಷಣವೇ ಅಬೂಬಕ್ಕರ್ ಮಧ್ಯಪ್ರವೇಶಿಸಿ ತಂದೆಯನ್ನು ರಕ್ಷಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಪಕ್ಕದ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ. ಅಂಗಾರಗುಡ್ಡೆ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸಮುದಾಯದವರು ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದು, ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದೂ ಸಮುದಾಯದವರು ಕೂಡ ಅಬು ಬಕರ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ.


ಸಂತ್ರಸ್ತ ಕುಟುಂಬ ಹಾಗೂ ಗ್ರಾಮಸ್ಥರು ಮುಲ್ಕಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು, ದೂರು ಆಧರಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


