
ಬಲೂನ್ ಗೆ ತುಂಬುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು, ಐದು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಅರಮನೆಯ ಮುಂಭಾಗ ನಡೆದಿದೆ.



ಅರಮನೆಯ ಜಯ ಮಾರ್ತಾಂಡ ಗೇಟ್ ಬಳಿ ಬಲೂನ್ಗೆ ಗ್ಯಾಸ್ ತುಂಬುವ ವೇಳೆ ಬ್ಲಾಸ್ಟ್ ಆಗಿದ್ದು, ತೀವ್ರತೆಗೆ ದೇಹಗಳು ಛಿದ್ರ ಛಿದ್ರಗೊಂಡಿದೆ. ಘಟನೆಯಲ್ಲಿ ಐದು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಮನೆ ಹೊರಗಡೆ ಯುವಕನೊಬ್ಬ ಸೈಕಲ್ ನಲ್ಲಿ ಬಲೂನ್ ಮಾರುತ್ತಿದ್ದು, ಗ್ಯಾಸ್ ತುಂಬಿಸುವ ವೇಳೆ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಬಲೂನ್ ಮಾರುವ ಯುವಕ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರಮನೆ ಆವರಣದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅರಮನೆ ಮಂಡಳಿಯು ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ 10 ದಿನಗಳ ‘ಮಾಗಿ ಉತ್ಸವ’– ಫಲಪುಷ್ಪ ಪ್ರದರ್ಶನ ಭಾನುವಾರ ಆರಂಭಗೊಂಡಿದ್ದು, ಪ್ರತಿದಿನ ರಾತ್ರಿ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ. ನಿನ್ನೆ ರಾತ್ರಿ ವಾಸುಕಿ ವೈಭವ್ ತಂಡದ ಕಾರ್ಯಕ್ರಮ ನಡೆಯುತ್ತಿರುವಾಗಲೇ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಹೀಗಾಗಿ ವಾಸುಕಿ ವೈಭವ್ ಅವರ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು.


ಸೈಕಲ್ನಲ್ಲಿ ಹೀಲಿಯಂ ಬಲೂನ್ ಮಾರುತ್ತಿದ್ದಾಗ ರಾತ್ರಿ 8.30ರ ವೇಳೆಗೆ ಸಿಲಿಂಡರ್ ಸ್ಫೋಟವಾಗಿದೆ. ಪ್ರತ್ಯಕ್ಷದರ್ಶಿ ಅರಮನೆಯ ಗೈಡ್ ನೀಡಿದ ಮಾಹಿತಿ ಪ್ರಕಾರ ಬಲೂನ್ ಮಾರಾಟಗಾರ ಅರಮನೆ ಮುಂಭಾಗದಲ್ಲಿ ನಿಂತು ಯಾವತ್ತೂ ಬಲೂನ್ ಮಾರುತ್ತಿರಲಿಲ್ಲ. ಆತ ಬಂದ ಕೂಡಲೇ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗುರುವಾರವೂ ಈ ಜಾಗದಲ್ಲಿ ನಿಂತು ಬಲೂನು ಮಾರಾಟ ಮಾಡಿರಲಿಲ್ಲ. ಹಾಗಾದರೆ ಅರಮನೆ ಮುಂಭಾಗವೇ ಹೀಲಿಯಂ ಸಿಲಿಂಡರ್ ಸ್ಫೋಟ ಯಾಕಾಯ್ತು ಎಂಬ ಪ್ರಶ್ನೆ ಎದ್ದಿದೆ.

ಸಿಲಿಂಡರ್ ಸ್ಪೋಟ ಆಕಸ್ಮಿಕವೇ? ಅಥವಾ ಉದ್ದೇಶಪೂರ್ವಕವೇ? ಯಾವತ್ತೂ ಅರಮನೆ ಮುಂಭಾಗದಲ್ಲಿ ಕಾಣಿಸಿಕೊಳ್ಳದವನು ರಾತ್ರಿ ಇಲ್ಲಿಗೆ ಬಂದಿದ್ದು ಯಾಕೆ? ಏಕಾಏಕಿ ಅರಮನೆ ಮುಂಭಾಗವೇ ಸಿಲಿಂಡರ್ ಸ್ಫೋಟ ಯಾಕಾಯಿತು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.
ಅರಮನೆ ಬಳಿ ವಸ್ತುಗಳನ್ನು ಮಾರಾಟ ಮಾಡುವವರು ಸಾಮಾನ್ಯವಾಗಿ ಮೈಸೂರಿನ ಅಸುಪಾಸಿನ ಜನರೇ ಆಗಿರುತ್ತಾರೆ. ಈಗ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಹಿನ್ನೆಲೆ ಕೆದಕಲು ಪೊಲೀಸರು ಮುಂದಾಗಿದ್ದಾರೆ. ಕೋಲ್ಕತ್ತಾ ಮೂಲದ ಸಲೀಂ ಮೈಸೂರಿಗೆ ಬಂದಿದ್ದು ಯಾವಾಗ? ಎಷ್ಟು ಸಮಯದಿಂದ ಬಲೂನ್ ಮಾರುತ್ತಿದ್ದ? ಅರಮನೆ ಮುಂಭಾಗವೇ ಸಲೀಂ ನಿರಂತರವಾಗಿ ಬಲೂನ್ ಮಾರುತ್ತಿದ್ದನೇ ಅಥವಾ ನಿನ್ನೆ ಮೊದಲು ಬಂದಿದ್ದ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ.

