
ವಿಟ್ಲ : ಕೇಪು ಗ್ರಾಮದಲ್ಲಿ ಅನುಮತಿ ರಹಿತ ಕೋಳಿ ಅಂಕ ನಡೆದಿದ್ದು, ಅಕ್ರಮಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.



ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಉಳ್ಳಾಲ್ತಿ ಜಾತ್ರೆಯ ಪ್ರಯುಕ್ತ ಸಾಂಪ್ರದಾಯಿಕ ಕೋಳಿ ಅಂಕವು ಮುರಳಿಧರ ರೈ ಎಂಬವರ ಗದ್ದೆಯಲ್ಲಿ ನಡೆಯುತ್ತಿತ್ತು. ಅನುಮತಿ ರಹಿತ ಕೋಳಿ ಅಂಕ ನಡೆಸುತ್ತಿದ್ದಾರೆಂದು ಆರೋಪಿಸಿ ವಿಟ್ಲ ಠಾಣಾ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಶಾಸಕ ಅಶೋಕ ಕುಮಾರ್ ರೈ ಕೋಳಿ ಅಂಕ ನಡೆಸುವಂತೆ ತಿಳಿಸಿದ್ದರು. ಹಾಗಾಗಿ ಪೊಲೀಸರ ಎಚ್ಚರಿಕೆಯ ನಡುವೆಯೂ ಕೋಳಿ ಅಂಕ ನಡೆದಿತ್ತು. ಪೊಲೀಸರ ಆರೋಪದ ಪ್ರಕಾರ, ಶಾಸಕ ಅಶೋಕ್ ಕುಮಾರ್ ರೈ ಅಕ್ರಮಕ್ಕೆ ದುಷ್ಪ್ರೇರಣೆ ನೀಡಿದ್ದಾರೆ ಎನ್ನಲಾಗಿದೆ.


ಸಂಜೆ 5ಗಂಟೆ ವೇಳೆಗೆ ಪೊಲೀಸರು ಸ್ಥಳದಲ್ಲಿದ್ದ 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅಂಕಕ್ಕೆ ತಂದಿದ್ದ 22 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಅಡಿ ಶಾಸಕ ಅಶೋಕ್ ಕುಮಾರ್ ರೈ, ಯಾವುದೇ ಪರವಾನಿಗೆ ಇಲ್ಲದೇ ಕೋಳಿ ಅಂಕಕ್ಕೆ ಜಾಗ ನೀಡಿದ ಮುರಳಿಧರ ರೈ ಸೇರಿದಂತೆ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.


