
ಇನ್ನು ಮುಂದೆ ಸರಕಾರಿ ನೌಕರರು ಕಚೇರಿಗೆ ಬರುವಾಗ ಟೈಟ್ ಜೀನ್ಸ್, ಹರಿದ ಜೀನ್ಸ್, ಸ್ಲೀವ್ ಲೆಸ್ ಬಟ್ಟೆ ಹಾಕುವಂತಿಲ್ಲ. ಸೂಕ್ತ ಬಟ್ಟೆಗಳನ್ನು ಧರಿಸಿ ಬರಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.



ಸಿಬ್ಬಂದಿ ಆಡಳಿತ ಮತ್ತು ಸುಧಾರಣಾ ಇಲಾಖೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಉಪ ಆಯುಕ್ತರು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ ಈ ಸಂದೇಶವನ್ನು ಕಳುಹಿಸಿದ್ದು, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಪಟ್ಟಿ ಮಾಡಿದೆ.
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲವು ನೌಕರರು ಅಸಭ್ಯವಾಗಿ ಬಟ್ಟೆ ಧರಿಸುತ್ತಾರೆ ಎಂದು ಸಾರ್ವಜನಿಕರು ಮತ್ತು ಕೆಲವು ಸಂಸ್ಥೆಗಳಿಂದ ಡಿಪಿಎಆರ್ ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನೌಕರರಿಗೆ ಯೋಗ್ಯವಾದ ಬಟ್ಟೆಗಳನ್ನು ಧರಿಸಲು ಹೇಳಲಾಗಿದ್ದರೂ, ಅನೇಕರು ಸೂಚನೆಗಳನ್ನು ಪಾಲಿಸುತ್ತಿಲ್ಲ.


ನಾವು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸುತ್ತೋಲೆ ತಿಳಿಸಿದೆ. ಕಾರ್ಪೊರೇಟ್ ಕಚೇರಿಗಳಿಗಿಂತ ಭಿನ್ನವಾಗಿ, ಸರ್ಕಾರಿ ನೌಕರರಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಆದಾಗ್ಯೂ, ಕೆಲವು ಯುವಜನತೆ ಕಾಲೇಜಿಗೆ ಹೋಗುವವರಂತೆ ಬಟ್ಟೆ ಧರಿಸುತ್ತಾರೆ, ಇದು ಸ್ವೀಕಾರಾರ್ಹವಲ್ಲ. ಹರಿದ ಜೀನ್ಸ್, ತೋಳಿಲ್ಲದ ಉಡುಪುಗಳು ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಾರೆ ಎಂದು ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಈ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಒಬ್ಬರ ಉಡುಗೆ ಇತರರಿಗೆ ಮುಜುಗರ ಉಂಟುಮಾಡಬಾರದು. ಸರ್ಕಾರಿ ಕಚೇರಿಗಳಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

