
ಮೊಟ್ಟೆಯಿಂದ ಅನಾರೋಗ್ಯ ಉಂಟಾಗುತ್ತದೆ ಎಂಬುದು ಸುಳ್ಳು. ಮೊಟ್ಟೆ ಪೌಷ್ಟಿಕಾಂಶಯುಕ್ತವಾಗಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಸ್ಪಷ್ಟಪಡಿಸಿದ್ದಾರೆ.



ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ನಾಡಿನ ಸಮಸ್ತ ಜನರೇ, ಕಳೆದ ನಾಲ್ಕೈದು ದಿನಗಳ ಹಿಂದಿದ್ದ ನಿಮ್ಮೆಲ್ಲರ ಆತಂಕವನ್ನು ದೂರ ಮಾಡುವಂತಹ ವರದಿ ಬಂದಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಮೊಟ್ಟೆಯಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳಿವೆ ಎಂಬ ಚರ್ಚೆ-ವದಂತಿ ಬಂದ ಹಿನ್ನೆಲೆಯಲ್ಲಿ ಹಲವು ಮೊಟ್ಟೆಗಳನ್ನು ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಅಂತಿಮವಾಗಿ ಎಲ್ಲರಿಗೂ ಸಮಾಧಾನ ತರುವಂತಹ ವರದಿ ಬಂದಿದೆ ಎಂದು ಹೇಳಿದ್ದಾರೆ.


ಮೊಟ್ಟೆಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಇರುವ ಸಾಧ್ಯತೆಯಿಲ್ಲ ಎಂದು ವದಂತಿ ಕೇಳಿ ಬಂದಾಗಲೇ ಹೇಳಿದ್ದೆ, ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷಾ ವೇಳೆ ಕೂಡ ಅದು ಸಾಭೀತಾಗಿದೆ. ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿದೆ. ನಾಗರೀಕರು ನಿರ್ಭೀತಿಯಿಂದ ಮೊಟ್ಟೆಗಳ ಸೇವನೆ ಮಾಡಬಹುದು ಎಂದು ತಿಳಿಸಿದ್ದಾರೆ.


