
ಉಡುಪಿ: ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಗ್ಗಿದ್ದ ಹತ್ತು ಮಂದಿ ವಲಸಿಗರಿಗೆ ಉಡುಪಿ ನ್ಯಾಯಾಲಯವು ಎರಡು ವರ್ಷದ ಜೈಲು ಮತ್ತು ತಲಾ ₹10,000 ದಂಡ ವಿಧಿಸಿದೆ.



2024ರ ಅಕ್ಟೋಬರ್ 11ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಮಲ್ಪೆ PSI ಪ್ರವೀಣ್ ಕುಮಾರ್ ಆರ್. ಮತ್ತು ಸಿಬ್ಬಂದಿಗಳು ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಶಂಕಾಸ್ಪದವಾಗಿ ಲಗೇಜ್ಗಳೊಂದಿಗೆ ಸುತ್ತಾಡುತ್ತಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅವರು ಯಾವುದೇ ಮಾನ್ಯ ಅನುಮತಿ ದಾಖಲೆಗಳಿಲ್ಲದೆ ಅಕ್ರಮವಾಗಿ ದೇಶ ಪ್ರವೇಶಿಸಿದ್ದರೊಂದಿಗೆ, ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿ ವಂಚನೆ ಮಾಡಲು ಯತ್ನಿಸುತ್ತಿದ್ದ ಮಾಹಿತಿ ಬಹಿರಂಗಗೊಂಡಿತು.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 138/2025ರಂತೆ BNS ಮತ್ತು Foreigners Act ಸೇರಿದಂತೆ ಸಂಬಂಧಿತ ಕಲಂಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಯಿತು. ಮಲ್ಪೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ನಡೆದ ಮುಂದಿನ ಕಾರ್ಯಾಚರಣೆಯಲ್ಲಿ ಉಳಿದ ಮೂವರನ್ನೂ ಬಂಧಿಸಿ ಒಟ್ಟು 10 ಮಂದಿಯನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಯಿತು.

ಹಕೀಮ್ ಅಲಿ, ಸುಜೋನ್ ಎಸ್.ಕೆ @ ಫಾರೂಕ್, ಇಸ್ಮಾಯಿಲ್ ಎಸ್.ಕೆ @ ಮಹಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ @ ಅಬ್ದುಲ್ ಕರೀಮ್, ಸಲಾಂ ಎಸ್.ಕೆ @ ಎಂ.ಡಿ. ಅಬ್ದುಲ್ ಅಜೀಜ್, ರಾಜಿಕುಲ್ ಎಸ್.ಕೆ, ಮೊಹಮ್ಮದ್ ಸೋಜಿಬ್ @ ಎಂ.ಡಿ. ಅಲ್ಲಾಂ ಆಲಿ, ರಿಮೂಲ್ @ ಅಬ್ದುಲ್ ರೆಹಮಾನ್, ಮೊಹಮ್ಮದ್ ಇಮಾಮ್ ಶೇಖ್ ಮತ್ತು ಮೊಹಮ್ಮದ್ ಜಹಾಂಗಿರ್ ಆಲಂ ಬಂಧಿತರು.

ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಮಾನ್ಯ Prl. Sr. Civil Judge & CJM, ಉಡುಪಿ ಇವರ ನ್ಯಾಯಾಲಯವು ಡಿಸೆಂಬರ್ 8ರಂದು ತೀರ್ಪು ಪ್ರಕಟಿಸಿದೆ.

